

ಕಾರಟಗಿ: ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಶುಕ್ರವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.
ಇದನ್ನೂ ಓದಿ:ಈದ್ ಮಿಲಾದ್ ದಿನ ಗಣೇಶ ವಿಸರ್ಜನೆ ರದ್ದು
ಹಬ್ಬದ ನಿಮಿತ್ತ ಮದಿನಾ ಮಸೀದಿಯಿಂದ ಜಾಮಿಯಾ ಮಸೀದಿ ವರೆಗೆ ಮೆಕ್ಕಾ ಮತ್ತು ಮದಿನಾದ ಸ್ತಬ್ಧಚಿತ್ರಗಳನ್ನು ಮೆರವಣಿಗೆ ಮಾಡಿದರು. ಪೈಗಂಬರ್ ಸ್ಮರಣೆ ಗೀತೆಗಳು ಮೊಳಗಿದವು. ನಂತರ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಜಾಮಿಯಾ ಮಸೀದಿಯ ಹಾಫೀಜ್ ಸೈಯದ್ ಸಾದಿಕ್ ಮಾತನಾಡಿ, ಸಮಾನತೆ, ಕೌಟುಂಬಿಕ ಬಾಂಧವ್ಯ, ನ್ಯಾಯಪರತೆ ಹಾಗೂ ಮಾನವೀಯ ಚಿಂತನೆಗಳಿಂದ ಪ್ರವಾದಿ ಪೈಗಂಬರರು ಇಂದಿಗೂ ಸ್ಮರಣೀಯ. ಬಡ್ಡಿ ವ್ಯವಹಾರ, ಮದ್ಯಪಾನ ಸೇರಿದಂತೆ ಸಾಮಾಜಿಕ ಅನಿಷ್ಟಗಳಿಂದ ದೂರವಿರುವಂತೆ ಕರೆ ನೀಡಿದರು. ಪ್ರವಾದಿಗಳು ದುರ್ಬಲರಿಗೆ ಆರ್ಥಿಕ ಶಕ್ತಿ ತುಂಬಲು ಜಕಾತ್ ಪದ್ಧತಿಯನ್ನು ಪರಿಚಯಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರವಾದಿಯ ಸಂದೇಶಗಳನ್ನು ಅಳವಡಿಸಿಕೊಂಡು ಸನ್ಮಾರ್ಗದತ್ತ ಸಾಗಬೇಕು ಎಂದರು.
ತಂಗಡಗಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ವೆಂಕಟೇಶ ತಂಗಡಗಿ, ಜಾಮಿಯ ಮಸೀದಿಯ ಅಧ್ಯಕ್ಷ ಅಬ್ದುಲ್ ಗನಿ, ಮಾಜಿ ಅಧ್ಯಕ್ಷರಾದ ಬಾಬುಸಾಬ್ ಬಳಿಗಾರ್, ಡಾ.ಎಂ.ಐ.ಮುದಗಲ್, ಉಪಾಧ್ಯಕ್ಷ ಮುಸ್ತಫಾ ಬೇವಿನಗಿಡ, ಮಿಲಾದ್ ಕಮಿಟಿ ಅಧ್ಯಕ್ಷ ಜುಬೇರ್, ಪ್ರಮುಖರಾದ ಅಮೃಲ್ ಹುಸೇನ್, ಖಾಜಾಹುಸೇನ್ ಮುಲ್ಲಾ, ಸಿರಾಜ್‌ಸಾಬ್, ರಾಜಾಸಾಬ್, ಅಲಿಹುಸೇನ್, ಮೊಹಿದ್ದೀನ್, ಅನೀಫ್ ಮೇಸ್ತ್ರಿ ಇತರರಿದ್ದರು.