

ವಿಜಯವಾಣಿ ಸುದ್ದಿಜಾಲ ಬೈಂದೂರು
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಎಲ್ಲೆಡೆ ಎಚ್ಚರಿಕೆ ಕ್ರಮ ತೆಗೆದುಕೊಳ್ಳುವ ಜತೆಗೆ ಸಾರ್ವಜನಿಕವಾಗಿ ಅರಿವು ಮೂಡಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಗುರುರಾಜ ಗಂಟಿಹೊಳೆ ನಿರ್ದೇಶನ ನೀಡಿದರು.
ಉಪ್ಪುಂದದ ಕಾರ್ಯಕರ್ತ ಕಾರ್ಯಾಲಯದದಲ್ಲಿ ಆರೋಗ್ಯ ಮತ್ತು ಆಯುಷ್ ಇಲಾಖೆ ವೈದ್ಯಾಧಿಕಾರಿಗಳು, ಕಂದಾಯ, ಸರ್ವೇ ಇಲಾಖೆ, ಬಿಎಸ್‌ಎನ್‌ಎಲ್, ಕೆಪಿಸಿಎಲ್ ಇಲಾಖೆ ಪ್ರಗತಿಪರಿಶೀಲನೆ ನಡೆಸಿದರು.
ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು. ಆಸ್ಪತ್ರೆಗೆ ಅಗತ್ಯ ಕಟ್ಟಡ ವ್ಯವಸ್ಥೆ ಮಾಡಿಸುವುದು, ಕಟ್ಟಡಕ್ಕೆ ಬೇಕಾದ ಜಾಗ ಗುರುತಿಸುವುದು ಇತ್ಯಾದಿಗಳನ್ನು ತ್ವರಿತವಾಗಿ ಮಾಡಬೇಕು. ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಆರೋಗ್ಯ ಇಲಾಖೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸಲು ಹಾಗೂ ರೋಗಿಗಳಿಗೆ ಔಷಧ ಕೊರತೆ ಆಗದಂತೆ ಕ್ರಮವಹಿಸಬೇಕು ಎಂದರು.
ನಾಡ ಹಾಗೂ ಹೇರೂರು ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕಟ್ಟಡ ಮಂಜೂರಾಗಿದ್ದು, ಪ್ರತಿ ಕೇಂದ್ರಕ್ಕೆ 65 ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ. ಈ ಕೇಂದ್ರಗಳಿಗೆ ಕೂಡಲೇ ನಿವೇಶನ ಒದಗಿಸಬೇಕು. ಕ್ಷೇತ್ರಕ್ಕೆ ಎರಡು ನಮ್ಮ ಕ್ಲಿನಿಕ್ ಮಂಜೂರಾಗಿದ್ದು, ಸದ್ಯದಲ್ಲೇ ಕಾರ್ಯಾರಂಭ ಮಾಡಬೇಕು ಎಂದು ಹೇಳಿದರು. ತಾಲೂಕು ವೈದ್ಯಾಧಿಕಾರಿ ಡಾ.ಪ್ರೇಮಾನಂದ, ಬಿಎಸ್‌ಎನ್‌ಎಲ್ ಅಧಿಕಾರಿ ಕೃಷ್ಣ, ಶಂಕರನಾರಾಯಣ ವಿಭಾಗದ ಆರ್‌ಎಫ್‌ಒ, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಕ್ಷೇತ್ರದ ಕೊಲ್ಲೂರು ಹಾಗೂ ಜಡ್ಕಲ್ ಭಾಗದಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿಯಿದೆ. ಈ ಬಗ್ಗೆ ಎಚ್ಚರಿಕೆ ವಹಿಸಲು ವೈದ್ಯಾಧಿಕಾರಿಗಳು ಮುಂದಾಗಬೇಕು. ಯಾವುದೇ ಕಾರಣಕ್ಕೂ ಇದನ್ನು ನಿರ್ಲಕ್ಷಿಸುವಂತಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಸುರಕ್ಷತಾ ಕ್ರಮ ಕೈಗೊಳ್ಳುವುದರ ಜತೆಗೆ ಈ ಬಗ್ಗೆ ಜನಜಾಗೃತಿ ಮೂಡಿಸಬೇಕು ಎಂದು ಸೂಚಿಸಿದ ಶಾಸಕರು, ಎಂಡೋಸಲ್ಫಾನ್ ಪುನರ್ವಸತಿ ಕೇಂದ್ರ ಕ್ಷೇತ್ರದ ಶಿರೂರು, ಕೊಲ್ಲೂರು, ಕಿರಿಮಂಜೇಶ್ವರ, ಆಲೂರು, ಸಿದ್ಧಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿದ್ದು, ಬಾಧಿತರಿಗೆ ಅಗತ್ಯ ಆರೋಗ್ಯ ಸೇವೆ ನೀಡಲು ಕ್ರಮ ತೆಗೆದುಕೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿರುವ ವಿಶೇಷ ಚೇತನರು, ಬೆನ್ನುಹುರಿ ಅಪಘಾತಕ್ಕೆ ಒಳಗದವರ ಬಗ್ಗೆ ವಿಶೇಷ ಕಾಳಜಿ ಇರಬೇಕು. ಅವರಿಗೆ ಇಲಾಖೆಯ ಸೌಲಭ್ಯ ಒದಗಿಸಬೇಕು. ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತರ ಕೊರತೆ ಬಗ್ಗೆ ವೈದ್ಯಾಧಿಕಾರಿಗಳು ಗಮನಕ್ಕೆ ತಂದಿದ್ದು, ಆಶಾ ಕಾರ್ಯಕರ್ತರ ನೇಮಕಕ್ಕೆ ಸರ್ಕಾರಕ್ಕೆ ಒತ್ತಡ ಹಾಕಲಾಗುವುದು. ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವುದು, ಪ್ರಸ್ತಾವನೆ ಕಳುಹಿಸಬೇಕು ಎಂದರು.
ಬೈಂದೂರು ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಇರುವ ಜಾಗ ಗುರುತಿಸುವಿಕೆ ಹಾಗೂ ಗಡಿ ಗುರುತಿಸುವ ಕಾರ್ಯವನ್ನು ಕೂಡಲೇ ಮಾಡಲು ಕಂದಾಯ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಕಾಮಗಾರಿ ನಡೆಯುತ್ತಿದ್ದು, ಆರ್‌ಒ ಪ್ಲಾಂಟ್ ನಿರ್ಮಾಣಕ್ಕೆ ಅನುದಾನದ ಕೊರತೆಯಿದೆ. ಇಲಾಖೆಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಳ್ಳಲು ಈಗಾಗಲೇ ಇಲಾಖೆಯ ಆಯುಕ್ತರಿಗೆ ಮನವಿ ಮಾಡಲಾಗಿದೆ. ಶೀಘ್ರ ಕಾಮಗಾರಿ ಮುಗಿಸಿ ಸೇವೆಗೆ ಲಭ್ಯವಾಗುವಂತೆ ಮಾಡಬೇಕಾಗಿದೆ. ಅಲ್ಲದೆ ಖಾಸಗಿ ಸಹಭಾಗಿತ್ವದಲ್ಲಿ ಕ್ಷೇತ್ರದ ನೊಂದವರಿಗೆ ಡಯಾಲಿಸಿಸ್ ಸೇವೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆಯ ಮುಂದಿನ ಹಂತದ ಕ್ರಮಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.