

ಗುಂಡ್ಲುಪೇಟೆ: ತಾಲೂಕಿನ ಬಫರ್ ವಲಯದ ಅರಣ್ಯ ಪ್ರದೇಶದಲ್ಲಿ ನಡೆಸುತ್ತಿದ್ದ ಅಕ್ರಮ ಚಟುವಟಿಕೆ ತಡೆಗಟ್ಟಲು ಅರಣ್ಯ ಹಾಗೂ ಪೊಲೀಸ್ ಇಲಾಖೆ ಮುಂದಾಗಿದೆ.
ಬಂಡೀಪುರ ಹುಲಿ ಯೋಜನೆಯ ಬಫರ್ ವಲಯ ಹಾಗೂ ಸೆಕ್ಷನ್-4ಗೆ ಸೇರಿದ ಗುಡ್ಡಗಳಲ್ಲಿ ಪ್ರವಾಸಿಗರು ಜೂಜು ಹಾಗೂ ಮೋಜು ಮಸ್ತಿ ಮಾಡಿ, ಪ್ಲಾಸ್ಟಿಕ್ ತ್ಯಾಜ್ಯ ಬೀಸಾಡುತ್ತಿರುವ ಬಗ್ಗೆ ಹೆಚ್ಚಿದ ವನ್ಯಜೀವಿಗಳ ಹಾವಳಿ ಶೀರ್ಷಿಕೆಯಡಿ ಸೆ.27ರಂದು ವಿಜಯವಾಣಿ ವಿಸ್ತೃತ ವರದಿ ಪ್ರಕಟಿಸಿತ್ತು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗುಡ್ಡಗಳ ಗಸ್ತಿಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವ ಜತೆಗೆ ಗದ್ದುಗಲ್ ಗುಡ್ಡದ ಶ್ರೀ ಸಿದ್ದಪ್ಪಾಜಿ ದೇವಾಲಯದ ಸುತ್ತಲೂ ಭಕ್ತರು, ಪ್ರವಾಸಿಗರು ಬೀಸಾಡಿದ್ದ ತ್ಯಾಜ್ಯಗಳನ್ನು ತೆರವುಗೊಳಿಸಿದೆ.
ಇದೇ ಸಂದರ್ಭದಲ್ಲಿ ಯುವಕರು ಗುಂಪು ಗುಡ್ಡ ದೇವಾಲಯಕ್ಕೆ ಆಗಮಿಸಿರುವ ಬಗ್ಗೆ ಗ್ರಾಮಸ್ಥರು ಪೊಲೀಸ್ ಇಲಾಖೆಯ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ಗಳಾದ ಹೊರೆಯಾಲ ಮಹದೇವಸ್ವಾಮಿ ಹಾಗೂ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿದರು. ದೇಗುಲಕ್ಕೆ ಆಗಮಿಸಿದ್ದ ಯುವಕರಿಗೆ ತಿಳಿ ಹೇಳಿದರು. ದೇಗುಲದಲ್ಲಿ ಪೂಜೆ ಮಾಡಿಸಿಕೊಂಡು ವಾಪಸಾಗಬೇಕು. ಇಲ್ಲೇ ಊಟ ಮಾಡಿದರೂ ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳನ್ನು ಜತೆಗೆ ಕೊಂಡೊಯ್ಯಬೇಕು ಎಂದು ತಾಕೀತು ಮಾಡಿದರು. ಅಲ್ಲದೆ ಅಕ್ರಮ ಹಾಗೂ ಅನೈತಿಕ ಚಟುವಟಿಕೆಯಲ್ಲಿ ತೊಡಗಿದರೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸ್ಥಳೀಯರಿಗೆ ಮನವಿ ಮಾಡಿದರು.