

ಕಡೂರು: ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆದವರಿಗೆ ಕಿರುಕುಳವಾಗದಂತೆ ತಡೆಯಲು ಫೈನಾನ್ಸ್ ಸಂಸ್ಥೆ ಸಿಬ್ಬಂದಿಗಳ ಸಭೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಪೊಲೀಸ್ ಇಲಾಖೆ ಕ್ರಮವಹಿಸಲಿದೆ ಎಂದು ಎಸ್‌ಪಿ ವಿಕ್ರಂ ಅಮ್ಟೆ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಡಿಎಸ್‌ಎಸ್‌ಮುಖಂಡರ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್‌ಗಳ ಸಿಬ್ಬಂದಿ ಸಾಲ ವಸೂಲು ಮಾಡಲು ಬಹಳ ಕಿರುಕುಳ ನೀಡುತ್ತಾರೆ ಎಂಬ ದೂರುಗಳು ವ್ಯಾಪಕವಾಗಿದೆ. ಇದರಕಡೆ ಪೊಲೀಸ್ ಇಲಾಖೆ ತುರ್ತು ಗಮನ ಹರಿಸುತ್ತದೆ. ಕಡೂರು ಪಟ್ಟಣದ ಟ್ರಾಫಿಕ್ ವ್ಯವಸ್ಥೆಗೆ ಸಂಬಂಧಿಸಿದಂತೆ ಹಲವಾರು ಸಲಹೆಗಳು ಬಂದಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಹಂಪ್‌ಹಾಕಲು ಅವಕಾಶ ಇಲ್ಲದಿರುವುದರಿಂದ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ದಲಿತರ ಮೇಲೆ ಯಾವುದೇ ದೌರ್ಜನ್ಯವಾಗದಂತೆ ಇಲಾಖೆ ಎಚ್ಚರ ವಹಿಸುತ್ತದೆ ಎಂದರು.
ಡಿಎಸ್‌ಎಸ್ ಮೈಸೂರು ವಿಭಾಗೀಯ ಸಂಚಾಲಕ ಕೃಷ್ಣಪ್ಪ ಮಾತನಾಡಿ, ಕಡೂರು ರೈಲ್ವೆ ನಿಲ್ದಾಣದಲ್ಲಿ ಅಕ್ಕಪಕ್ಕದ ಊರುಗಳಿಂದ ಬಂದಿರುವ ಹಲವಾರು ಜನರು ರಾತ್ರಿ ವೇಳೆ ರೈಲು ನಿಲ್ದಾಣದಲ್ಲೇ ಮಲಗುತ್ತಾರೆ. ಈ ಬಗ್ಗೆ ಇಲಾಖೆ ಗಮನ ಹರಿಸಬೇಕು. ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದವರ ಮೇಲೆ ದೌರ್ಜನ್ಯ ನಡೆಸಿಹೊರಹಾಕಲಾಗಿದೆ. ನಿವೇಶನ ರಹಿತ ದಲಿತ ವರ್ಗದವರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಡಿವೈಎಸ್ಪಿ ಹಾಲಮೂರ್ತಿರಾವ್, ಕಡೂರು, ಬೀರೂರು ಸಿಪಿಐಗಳಾದ ರಫೀಕ್, ಶ್ರೀಕಾಂತ್, ಪಿಎಸೈ ಪವನ್ ಕುಮಾರ್, ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್ ಸ್ವಾಮಿ, ಅಂಬೇಡ್ಕರ್ ನಗರದ ಶಂಕರ್, ಡಿಎಸ್‌ಎಸ್ ಮುಖಂಡರಾದ ಲಕ್ಷ್ಮಣ್, ಸಚಿನ್, ಸಗನಪ್ಪ, ಪ್ರಶಾಂತ್ ಇದ್ದರು.