ಆನೆ-ಮಾನವ ಸಂಘರ್ಷ ತಡೆಗೆ ಕ್ರಮ

ಆನೆ-ಮಾನವ ಸಂಘರ್ಷ ತಡೆಗೆ ಕ್ರಮ
Published on

ಸುಂಟಿಕೊಪ್ಪ: ಆನೆ-ಮಾನವ ಸಂಘರ್ಷ ಶಮನಗೊಳಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರಗಳ ಕುರಿತು ಸದ್ಯದಲ್ಲೇ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಮೇಲಾಧಿಕಾರಿಗಳಿಗೆ ಸೂಕ್ತ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಅರಣ್ಯ ಇಲಾಖೆಯ ಕೊಡಗು ವೃತ್ತದ ಮಡಿಕೇರಿ ವಿಭಾಗದ ಉಪಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದರು.

ಕೆದಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾಫಿ ಬೆಳೆಗಾರರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಕಾಡಾನೆ ಓಡಿಸುವ ಸಂದರ್ಭದಲ್ಲಿ ಇಲಾಖೆಯವರಿಗೆ ಮತ್ತು ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಬೇಕಾಗುವ ಅಂಬುಲೆನ್ಸ್ ವಾಹನ ಒದಗಿಸುವ ಬಗ್ಗೆ ಘೋಷಣೆ, ಒಂದೂವರೆ ವರ್ಷದ ಹಿಂದೆ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಮರುಪರಿಶೀಲನೆ ಮತ್ತು ನಿಯಮಿತವಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ಕರೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಈಗಾಗಲೇ ಆನೆ ಓಡಿಸುವ ಕಾರ್ಯಾಚರಣೆ ಚಾಲ್ತಿಯಲ್ಲಿದ್ದು, ಇದು ಹೆಚ್ಚು ಪರಿಣಾಮಕಾರಿಯಾಗಿ ಆಗಬೇಕು. ಯಾವುದೇ ಸಂದರ್ಭದಲ್ಲಿ ಮಾನವ ಜೀವಹಾನಿ ಆಗಬಾರದು ಎಂಬುದು ನಮ್ಮ ಕಾಳಜಿಯಾಗಿದ್ದು, ಕಾಡಾನೆ ಓಡಿಸುವ ಕಾರ್ಯಾಚರಣೆ ಸಂದರ್ಭ ತೆಗೆದುಕೊಳ್ಳಬೇಕಾದ ಕ್ರಮಗಳ ಆರ್‌ಆರ್‌ಟಿಗೆ ಸಂಪೂರ್ಣ ವಿವೇಚನೆ ಮತ್ತು ಜವಾಬ್ದಾರಿ ನೀಡಲಾಗಿದೆ ಎಂದರು.
ಆನೆಗಳು ಬಂದ ಬಳಿಕ ಓಡಿಸುವುದಕ್ಕಿಂತ ಅವುಗಳ ಬರುವಿಕೆಯನ್ನು ತಡೆಗಟ್ಟಿ ಮರಳಿ ಕಾಡಿಗೆ ಅಟ್ಟುವ ಕೆಲಸಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ ಎಂದು ಭಾಸ್ಕರ್ ಹೇಳಿದರು.
ಈಗಾಗಲೇ ಇಲಾಖೆ ವತಿಯಿಂದ ವಿರಾಜಪೇಟೆ ಮತ್ತು ಮಡಿಕೇರಿ ವಿಭಾಗದಲ್ಲಿ ಕ್ರಮವಾಗಿ 130 ಮತ್ತು 65 ಆನೆಗಳು ಪತ್ತೆಯಾಗಿದ್ದು, ಇದರಲ್ಲಿ ವಿರಾಜಪೇಟೆ ವ್ಯಾಪ್ತಿಯಲ್ಲಿ ಕೇವಲ 5 ಆನೆಗಳು ಅರಣ್ಯದಲ್ಲಿದ್ದರೆ, 125 ಆನೆಗಳು ತೋಟಗಳಲ್ಲಿ ಬೀಡುಬಿಟ್ಟಿವೆ. ಅದೇ ರೀತಿ ಮಡಿಕೇರಿ ವಿಭಾಗದಲ್ಲಿ 25 ಆನೆಗಳು ಕಾಡಿನಲ್ಲಿದ್ದರೆ, ಉಳಿದ ಆನೆಗಳು ತೋಟಗಳಲ್ಲಿ ಸಂಚರಿಸುತ್ತಿವೆ ಎಂದು ಮಾಹಿತಿ ನೀಡಿದರು.

ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆನೆ-ಮಾನವ ಸಂಘರ್ಷದ ಕುರಿತು ಇಲಾಖೆ ಜನಪ್ರತಿನಿಧಿಗಳು ಮತ್ತು ಕೊಡಗು ವನ್ಯಜೀವಿ ಸಂಸ್ಥೆಯ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿದ್ದು, ಈ ಬಗ್ಗೆ ಪ್ರಸ್ತಾವನೆಗಳನ್ನು ಇಲಾಖೆಯ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದರು.
ಈಗಾಗಲೇ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕಾಡಾನೆಗಳು ಸೆರೆ ಹಿಡಿಯುವ ಬಗ್ಗೆ ವಿರೋಧ ಮತ್ತು ಅವುಗಳನ್ನು ಪಳಗಿಸುವಾಗ ನೀಡುವ ಹಿಂಸೆಯನ್ನು ತಪ್ಪಿಸುವ ನಿಟ್ಟಿನಲ್ಲಿ ನಿರ್ದೇಶನಗಳನ್ನು ನೀಡಬೇಕೆಂದು ಅರ್ಜಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೆದಕಲ್ ಗ್ರಾಮ ಪಂಚಾಯಿತಿ ಸದಸ್ಯ ಜಿ.ಡಿ.ಶಿವಶಂಕರ್ ಪ್ರಸ್ತಾವಿಕವಾಗಿ ಮಾತನಾಡಿ, ಆನೆ-ಮಾನವ ಸಂಘರ್ಷ ಪರಿಹರಿಸಲಾಗದ ಮಟ್ಟಕ್ಕೆ ಬೆಳೆದಿದ್ದು ಆನೆ ಹಾವಳಿ ಸಂತ್ರಸ್ತರಾದವರಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಜತೆಗೆ, ಮೂರು ತಿಂಗಳಿಗೊಮ್ಮೆ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಬೇಕೆಂದು ಆಗ್ರಹಿಸಿದರು. ಕಾಫಿ ಬೆಳೆಗಾರರು ಮತ್ತು ಸಂತ್ರಸ್ತರು ಸಭೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ತೋಡಿಕೊಂಡರು.

ಅರಣ್ಯ ಇಲಾಖೆಯ ಕೆಳಹಂತದ ಸಿಬ್ಬಂದಿಗೆ ಆನೆ ಸೆರೆ ಕಾರ್ಯಾಚರಣೆ ಸಂದರ್ಭ ಯಾವುದೇ ರಕ್ಷಣೆ ಇಲ್ಲ. ಅಂಬುಲೆನ್ಸ್ ವ್ಯವಸ್ಥೆ ಇಲ್ಲ. ಒಬ್ಬರು ವಾಚರ್ ತೀವ್ರ ಗಾಯಗೊಂಡ ಸಂದರ್ಭ ಆತನನನ್ನು ಬೈಕ್‌ನಲ್ಲಿ ಕರೆದೊಯ್ಯಲಾಗಿತ್ತು. ತನ್ನ ಸಿಬ್ಬಂದಿಯನ್ನು ರಕ್ಷಣೆ ಮಾಡಿಕೊಳ್ಳಲಾಗದ ಇಲಾಖೆ ಆನೆಗಳಿಂದ ಸಾರ್ವಜನಿಕರಿಗೆ ಆಗುವ ಹಾನಿಯನ್ನು ಹೇಗೆ ತಪ್ಪಿಸುತ್ತೀರಿ ಎಂದು ಕೊರವಂಡ ಸಂತೋಷ್ ಪೂವಯ್ಯ ಪ್ರಶ್ನಿಸಿದರು.

ಕಾಫಿ ಬೆಳೆಗಾರ ಶ್ರೀನಾಥ್ ಮಾತನಾಡಿ, ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಬೇಕು. ಅರಣ್ಯಭವನದಲ್ಲಿ ಅಥವಾ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುವ ಸಭೆಗೆ ನಮಗೂ ಪ್ರಾತಿನಿಧ್ಯ ಬೇಕು. ಪ್ರಾಣಿ ಪ್ರಿಯರು ಮತ್ತು ಪರಿಸರವಾದಿಗಳು, ಸ್ವಯಂಸೇವಾ ಸಂಸ್ಥೆಗಳು ನಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಸೂಚಿಸಬೇಕೆ ಹೊರತು ಅವರಷ್ಟಕ್ಕೆ ಸಭೆಗಳನ್ನು ಮಾಡಿಕೊಂಡು ಸಲಹೆಗಳನ್ನು ನೀಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಕೆದಕಲ್ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಂಜು ಪೊನ್ನಪ್ಪ ಮಾತನಾಡಿ, ಈ ರೀತಿಯ ಸಭೆಗಳು ಸಾಕಷ್ಟು ನಡೆದಿದ್ದು, ಯಾವುದೇ ಪರಿಹಾರ ಸಿಕ್ಕಿಲ್ಲ. ಕೇವಲ ಅಂದಿನ ಸಭೆ ಅಂದಿಗೆ ಎಂಬ ವ್ಯವಸ್ಥೆಯನ್ನು ನಾವು ಕಾಣುತ್ತಿದ್ದು, ಸಭೆಯ ತೀರ್ಮಾನಗಳು ಯಾಕೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಬೆಳೆಗಾರರಾದ ಚೆಪ್ಪುಡಿರ ಸತೀಶ್, ಕೆ.ಕೆ.ಬೆಳಿಯಪ್ಪ, ಸಂಜಯ್ ಸರಳಾಯ, ಮೋಹನ್‌ದಾಸ್ ಮತ್ತಿತರರು ಆನೆಗಳ ಹಾವಳಿಯಿಂದ ಎದುರಾಗಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಕೊಡಗರಹಳ್ಳಿ, ಕಂಬಿಬಾಣೆ, ನಾಕೂರು ಶಿರಂಗಾಲ, ಕೆದಕಲ್, ಹೊರೂರು, ಕಾರೆಕೊಲ್ಲಿ, ಭೂತನಕಾಡು, ಮತ್ತಿಕಾಡು, ಚೌಡಿಕಾಡು ವ್ಯಾಪ್ತಿಯಲ್ಲಿನ ಕಾಫಿಬೆಳೆಗಾರರು ಪಾಲ್ಗೊಂಡು ಸಮಸ್ಯೆಗಳನ್ನು ವಿವರಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಸಿಗೋಪಾಲ್, ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್‌ಕುಮಾರ್, ಆರ್‌ಆರ್‌ಟಿ ತಂಡದ ಮುಖ್ಯಸ್ಥ, ಸಹಾಯಕ ವಲಯ ಅರಣ್ಯಾಧಿಕಾರಿ ದೇವಯ್ಯ, ಸಿದ್ದರಾಮ, ಸುಂಟಿಕೊಪ್ಪ ಅಪರಾಧ ವಿಭಾಗದ ಎಸ್‌ಐ ಸ್ವಾಮಿ, ಎಎಸ್‌ಐ ತೀರ್ಥಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net