

ಮುಂಡಗೋಡ: ತಾಲೂಕಾಸ್ಪತ್ರೆಯಲ್ಲಿನ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ನೀಗಿಸುವ ಮೂಲಕ ನೂರು ಹಾಸಿಗೆ ಆಸ್ಪತ್ರೆ ಸದ್ಬಳಕೆಗೆ ಕ್ರಮ ವಹಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶಕುಮಾರ ಸಿಂಗ್ ಹೇಳಿದರು.
ತಾಲೂಕು ಸರ್ಕಾರಿ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನೂರು ಹಾಸಿಗೆ ಆಸ್ಪತ್ರೆಯಾದರೂ ಅಷ್ಟು ಪ್ರಮಾಣದಲ್ಲಿ ರೋಗಿಗಳು ಬರುತ್ತಿಲ್ಲ. ಜತೆಗೆ ವೈದ್ಯರ ಹಾಗೂ ನರ್ಸ್‌ಗಳ ಕೊರತೆ ಇದೆ. ಇರುವ ಸಿಬ್ಬಂದಿಯಿಂದ ಸಮರ್ಪಕವಾಗಿ ಕೆಲಸ ಪಡೆದುಕೊಳ್ಳುವ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಳೆದ ವರ್ಷ ಶಿಕ್ಷಕರ ನೇಮಕಾತಿ ನಡೆದಿದೆ. ಹನ್ನೆರಡು ಸಾವಿರ ಶಿಕ್ಷಕರ ನೇಮಕಾತಿ ಆಗಿದೆ. ಉಳಿದ ಮೂರು ಸಾವಿರ ಶಿಕ್ಷಕರು ಶೀಘ್ರವೇ ಆಗಮಿಸುವರು. ಪ್ರಸಕ್ತ ವರ್ಷವೂ ಶಿಕ್ಷಕರ ನೇಮಕಾತಿಯ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದರು.
ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲು ತಹಸೀಲ್ದಾರ್ ಹಾಗೂ ತಾಪಂ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಕಾರವಾರ ಉಪವಿಭಾಗಾಧಿಕಾರಿ ಕನಿಷ್ಕ, ಡಿಎಚ್‌ಒ ಡಾ. ನೀರಜ್ ಬಿ.ವಿ, ತಹಸೀಲ್ದಾರ್ ಶಂಕರ ಗೌಡಿ, ತಾಪಂ ಅಧಿಕಾರಿ. ಟಿ.ವೈ.ದಾಸನಕೊಪ್ಪ, ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನರೇಂದ್ರ ಪವಾರ, ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಚ್ಛತೆ ಕಾಪಾಡದಿರುವುದು ಹಾಗೂ ಶೌಚಗೃಹ ಬಳಸದಿರುವುದನ್ನು ಗಮನಿಸಿದ ರಿತೇಶಕುಮಾರ್‌ಸಿಂಗ್ ಅವರು ಪ್ರಾಚಾರ್ಯ ಮತ್ತು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಅಮಾನತು ಮಾಡುವುದಾಗಿ ಎಚ್ಚರಿಸಿದರು.
ಮುರಿದ ಡೆಸ್ಕ್ ಒಂದೆಡೆ ಹಾಕಿರುವುದನ್ನು ಗಮನಿಸಿದ ರಿತೇಶಕುಮಾರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು. ಪ್ರೌಢಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಾಚಾರ್ಯ ವಿವರಿಸಿದರು. ತಕ್ಷಣವೇ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ಸ್ಥಳಕ್ಕೆ ಕರೆಯಿಸಿ, ಸಂಜೆಯೊಳಗೆ ಪೈಪ್ ಜೋಡಿಸಿ ಕುಡಿಯುವ ನೀರನ್ನು ಒದಗಿಸಲು ಸೂಚಿಸಿದರು.
ನಂತರ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಸಲಹೆ-ಸೂಚನೆ ನೀಡಿದರು. ನಂತರ ಪಾಳ ಸಮುದಾಯ ಆರೋಗ್ಯ ಕೇಂದ್ರ, ಉರ್ದು ಪ್ರೌಢ ಶಾಲೆ, ಐಟಿಐ ಕಾಲೇಜ, ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಮತ್ತು ಮಳಗಿಯ ಪಬ್ಲಿಕ್ ಶಾಲೆ, ಹೈಸ್ಕೂಲ್, ಕಾಲೇಜಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.