ಪಟ್ಟಣದ ಸ್ವಚ್ಛತೆ ಕಾಪಾಡಲು ಕ್ರಮ

23MDG2
Published on

ಮೂಡಿಗೆರೆ: ಪಟ್ಟಣದ ಸ್ವಚ್ಛತೆ ಕಾಪಾಡಲು ಈಗಾಗಲೇ ಕ್ರಮ ವಹಿಸಿದ್ದು, ಇದಕ್ಕೆ ಸಾರ್ವಜನಿಕರೂ ಕೈಜೋಡಿಸಬೇಕು ಎಂದು ಪಪಂ ಅಧ್ಯಕ್ಷ ಕೆ.ವೆಂಕಟೇಶ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶುಕ್ರವಾರ ನಡೆಯುವ ಸಂತೆಯಿಂದ ಡಿಎಸ್‌ಬಿಜಿ ಪ್ರಥಮ ದರ್ಜೆ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಸಂತೆಗೆ ಬರುವ ಸರಕು ಸಾಗಾಟದ ವಾಹನ ಅಲ್ಲಲ್ಲಿ ನಿಲ್ಲಿಸಿ ವ್ಯಾಪಾರ ನಡೆಸುತ್ತಿರುವುದರಿಂದ ಸಮಸ್ಯೆಯಾಗಿದೆ. ಈ ರಸ್ತೆಯಲ್ಲಿ ಯಾರೂ ಅಂಗಡಿ ತೆರೆದು ವ್ಯಾಪಾರ ನಡೆಸದಂತೆ ಕ್ರಮ ವಹಿಸಲಾಗಿದೆ ಎಂದರು.

ಪಪಂ ಕಚೇರಿಯಲ್ಲಿ ಸಮಯಕ್ಕೆ ಸರಿಯಾಗಿ ಇ-ಖಾತೆ ಮಾಡಿಕೊಡದ ಬಗ್ಗೆ ಆರೋಪ ಕೇಳಿಬಂದಿದ್ದು, ಬಾಕಿ ಉಳಿದ 149 ಇ ಖಾತೆಯನ್ನು ಶೀಘ್ರವಾಗಿ ವಿಲೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಈಗ 30 ಅರ್ಜಿಗಳು ಮಾತ್ರ ಬಾಕಿ ಉಳಿದಿದ್ದು, ಈ ತಿಂಗಳ ಅಂತ್ಯದಲ್ಲಿ ವಿಲೆ ಮಾಡಲಾಗುವುದು ಎಂದು ತಿಳಿಸಿದರು.

ಪಟ್ಟಣದಲ್ಲಿ ಕಸ ಸಂಗ್ರಹಿಸಲು ಪ್ರತಿದಿನ ಮನೆ ಮನೆಗೆ ಕಸ ಸಂಗ್ರಹಿಸುವ ಆಟೋಗಳು ಮನೆ ಬಾಗಿಲಿಗೆ ತೆರಳುತ್ತಿದ್ದರೂ ಕೆಲ ಕೋಳಿ ಮಾಂಸದ ಅಂಗಡಿ, ಹೊಟೇಲ್ ಮಾಲೀಕರು ಮತ್ತು ಮನೆಯವರು ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿರುವುದು ಕಂಡುಬಂದಿದೆ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಮೀನು, ಕುರಿ, ಕೋಳಿ ಮಾಂಸದ ಅಂಗಡಿಯನ್ನು ಒಂದೇ ಕಡೆ ನಿರ್ವಹಿಸುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. ಪ್ರಕಾಶ್, ಪ್ರದೀಪ್, ರಂಜಿನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net