ಹೆಮ್ಮಾಡಿ ಸೇವಂತಿಗೆ ಇಳುವರಿಗೆ ಕ್ರಮ

sevantige
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಹೆಮ್ಮಾಡಿ ಸೇವಂತಿಗೆ ಜಿಲ್ಲೆಯ ಅಪರೂಪದ ಬೆಳೆಗಳಲ್ಲಿ ಒಂದಾಗಿದ್ದು, ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಹೂವು ಇಳುವರಿ, ಅರಳುವಿಕೆಯಲ್ಲಿ ತೊಂದರೆಯಾಗುತ್ತಿದೆ. ಇದಕ್ಕೆ ರೈತರು ಕೆಲವೊಂದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಭೂಮಿಕಾ ಎಚ್.ಆರ್. ಹೇಳಿದರು.

ಉಡುಪಿ ಜಿ.ಪಂ., ಕುಂದಾಪುರ ತೋಟಗಾರಿಕಾ ಇಲಾಖೆ ವತಿಯಿಂದ ಶನಿವಾರ 2024-25ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಹೆಮ್ಮಾಡಿ ಸೇವಂತಿಗೆ ಬೆಳೆಯ ಸುಧಾರಿತ ಬೇಸಾಯ ಕ್ರಮಗಳು ಮತ್ತು ಕೀಟ ರೋಗ ನಿರ್ವಹಣೆ ಕುರಿತು ಕ್ಷೇತ್ರೋತ್ಸವ ಕಾರ‌್ಯಕ್ರಮದಲ್ಲಿ ಮಾಹಿತಿ ನೀಡಿದರು. ಕುಂದಾಪುರದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ನಿಧೀಶ್ ಕೆ.ಜಿ. ಬೇಸಾಯ ಕ್ರಮಗಳ ಸುಧಾರಣೆ, ಪಡೆಯುವ ಲಾಭ, ಕೀಟ ಬಾಧೆಗೆ ಪರಿಹಾರದ ಕುರಿತು ವಿವರಿಸಿದರು.

ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ಸೇವಂತಿಗೆ ಬೆಳೆಗಾರರ ಸಂಘದ ಅಧ್ಯಕ್ಷ ಮಹಾಬಲ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೃಷ್ಣ ದೇವಾಡಿಗ, ಸಂಘದ ಪದಾಧಿಕಾರಿಗಳು, ತೋಟಗಾರಿಕಾ ಇಲಾಖೆಯ ಹೋಬಳಿ ಅಕಾರಿ ಉಮೇಶ್ ಬಂಟ್, ಸೇವಂತಿಗೆ ಬೆಳೆಗಾರರು ಉಪಸ್ಥಿತರಿದ್ದರು. ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ಸೇವಂತಿಗೆ ಬೆಳೆದ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ವೀಕ್ಷಿಸಿ, ಮಾಹಿತಿ ಪಡೆದರು. ಸಹಾಯಕ ತೋಟಗಾರಿಕಾ ಅಧಿಕಾರಿ ಮಧುಕರ್ ಕಾರ್ಯಕ್ರಮ ನಿರೂಪಿಸಿದರು.

ತಳಿ ರಕ್ಷಣೆ ಮಾಹಿತಿ, ಸಂವಾದ

ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಸಹಾಯಕ ಪ್ರಾಧ್ಯಾಪಕಿ ಡಾ.ಶ್ರೀದೇವಿ ಜಕ್ಕೆರಾಲ್ ಸೇವಂತಿಗೆ ತಳಿಯ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕೆಲವೊಂದು ಮಾರ್ಗಸೂಚಿಗಳನ್ನು ತಿಳಿಸಿದರು. ಬಳಿಕ ರೈತರಿಂದ ಮಾಹಿತಿ ಪಡೆದು, ಸ್ಥಳೀಯ ಗ್ರಾ.ಪಂ.ನಿಂದ ಹೆಮ್ಮಾಡಿ ಸೇವಂತಿಗೆ ತಳಿಯ ಇತಿಹಾಸದ ಪತ್ರ ಪಡೆದುಕೊಳ್ಳುವಂತೆ ಸೂಚಿಸಿದರು. ಹೆಮ್ಮಾಡಿ ಸೇವಂತಿಗೆ ಕುರಿತು ಕೃಷಿ ವಿಜ್ಞಾನಿಗಳು ಹಾಗೂ ತೋಟಗಾರಿಕಾ ಅಧಿಕಾರಿಗಳು ಸ್ಥಳೀಯ ಬೆಳೆಗಾರರೊಂದಿಗೆ ಸಂವಾದ ನಡೆಸಿ ಸಲಹೆಗಳನ್ನು ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net