

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ತಾಲೂಕು ಆಡಳಿತ ಹಾಗೂ ಬೆಳ್ತಂಗಡಿ ತಾಪಂ ವತಿಯಿಂದ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಮುಂಗಾರು ಮಳೆಯ ಪೂರ್ವಸಿದ್ಧತೆ ಬಗ್ಗೆ ತಾಲೂಕುಮಟ್ಟದ ವಿವಿಧ ಇಲಾಖಾಧಿಕಾರಿಗಳ ಸಭೆ ಗುರುವಾಯನಕೆರೆ ಸಭಾಭವನದಲ್ಲಿ ಸೋಮವಾರ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ತುಳುಪುಳೆ ಮಾತನಾಡಿ, ಶಾಲೆಗಳ ಕಟ್ಟಡ ಸುರಕ್ಷತೆ ಬಗ್ಗೆ ಸೂಚನೆ ನೀಡಲಾಗಿತ್ತು. ರಜೆಯಲ್ಲೇ ಮಾಹಿತಿ ಪಡೆದಿದ್ದೇವೆ. ಪ್ರಸಕ್ತ 24 ಶಾಲೆಗಳ ಕಟ್ಟಡ ಸುರಕ್ಷತೆಯಿಲ್ಲ. ದುರಸ್ತಿ ಅಗತ್ಯವಾಗಿದೆ. ಕಡಿರುದ್ಯಾವರ ಶಾಲೆ ಸಮೀಪ 15 ಮರ, ಬೆಳ್ತಂಗಡಿ ಮಾದರಿ ಶಾಲೆಯಲ್ಲಿ 8 ಶಾಲೆ ಉಜಿರೆ ಪೆರಿಯಡ್ಕ, ಚಾರ್ಮಾಡಿ, ಬೆಳ್ತಂಗಡಿ ಮಾದರಿ ಶಾಲಾವರಣದಲ್ಲಿ ವಿದ್ಯುತ್ ತಂತಿಯಿದೆ. ಅದನ್ನು ಶಿಫ್ಟ್ ಮಾಡಿದರೆ ಸಾಕು ಎಂದರು. ನಾಳೆಯೆ ಮಾಡಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ಉತ್ತರಿಸಿದರು.
ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುರಕ್ಷತೆಯಿಲ್ಲದ ಕೊಠಡಿಯಲ್ಲಿ ಮಕ್ಕಳನ್ನು ಹೇಗೆ ಕೂರಿಸುತ್ತೀರಿ. ಪಿ.ಆರ್.ಇ.ಡಿ. ನಲ್ಲಿ ಸುರಕ್ಷತೆ ಬಗ್ಗೆ ಅಸುರಕ್ಷಿತ ಮತ್ತು ರಿಪೇರಿ ಪ್ರತ್ಯೇಕ ವರದಿ ನೀಡಬೇಕು. ಅಸುರಕ್ಷಿತ ಅಂತ ಕೊಟ್ಟರೆ ಯಾವ ಕಾರಣಕ್ಕೂ ಮಕ್ಕಳನ್ನು ಕೂರಿಸುವ ಹಾಗಿಲ್ಲ. ಬೇರೆ ವ್ಯವಸ್ಥೆ ಮಾಡಬೇಕು ಎಂದರು.
ಸಿಡಿಪಿಒ ಪ್ರಿಯಾ ಆಗ್ನೆಸ್ ಅಂಗನವಾಡಿ ಕಟ್ಟಡದ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಕಕ್ಕೆಜಾಲು, ಮುಂಡಾಜೆ ನಿಡಿಗಲ್ ಅಂಗನವಾಡಿಗಳ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. 18 ಅಂಗನವಾಡಿ ದುರಸ್ತಿ ಮಾಡಬೇಕಿದೆ. ಮಳೆಯಿಂದ ಹೊಳೆ, ನದಿ ದಾಟಿ ಬರುವ ಮಕ್ಕಳಿಗೆ ಸಾಧ್ಯವಾದರೆ ಮಾತ್ರ ಬರುವಂತೆ ಸೂಚನೆ ನೀಡಲಾಗಿದೆ ಎಂದರು.
ಲೋಕೋಪಯೋಗಿ ಇಂಜಿನಿಯರ್ ಬಕ್ಕಪ್ಪ ಮಾತನಾಡಿ, ತಾಲೂಕಿನಲ್ಲಿ ರಾ.ಹೆ ಎರಡು, ನಾಲ್ಕು ರಾಜ್ಯ ಹೆದ್ದಾರಿ, 22 ಜಿಲ್ಲಾ ಮುಖ್ಯ ರಸ್ತೆ 2024-25ನೇ ಸಾಲಿನ ಅನುದಾನದಲ್ಲಿ ರಸ್ತೆ ನಿರ್ವಹಣೆ ಮಾಡಲಾಗಿದೆ ಎಂದರು.
ಸೋಮಂತಡ್ಕ ದಿಡುಪೆ, ಧರ್ಮಸ್ಥಳ ಮುಂಡಾಜೆ ರಸ್ತೆ ದುರಸ್ತಿ ಸೂಕ್ತ ಕ್ರಮವಹಿಸಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಗಳು ಯಾವುದೇ ಸಮಯದಲ್ಲಿ ಬೀಳುವ ಸಾಧ್ಯತೆಯಿದೆ. ಈ ಬಗ್ಗೆ ಮತ್ತೆ ಮನವಿ ಸಲ್ಲಿಸಲಾಗಿದೆ ಎಂದು ಮುಂಡಾಜೆ ಪಿಡಿಒ ಗಾಯತ್ರಿ ತಿಳಿಸಿದರು.
ಜಲಜೀವನ್ ಮಿಷನ್ ಕಾಮಗಾರಿಯಿಂದಾದ ಅವ್ಯವಸ್ಥೆ ಬಗೆಗಿನ ದೂರುಗಳಿಗೆ ಉತ್ತಿಸಿದ ಜಲಜೀವನ್ ಮಿಷನ್ ಇಂಜಿನಿಯರ್ ಜಗದೀಪ್ ಶೇಟ್ ಶ್ರೀದಲ್ಲಿ ಸರಿಪಡಿಸಲಾಗುವುದು ಎಂದರು.
ತಾಲೂಕಿನಲ್ಲಿ ಕಿಂಡಿ ಅಣೆಕಟ್ಟುಗಳ ಗೇಟು ತೆರವು ಕಾರ್ಯದ ಬಗ್ಗೆ ಶಾಸಕರು ಪ್ರಶ್ನಿಸಿದರು. ಆರೋಗ್ಯ ಇಲಾಖೆ ವಿಚಾರವಾಗಿ ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಾತ್, ಕೃಷಿ ಇಲಾಖೆ ಎಡಿಎ ವೀರಭದ್ರಪ್ಪ, ಚಂದ್ರಶೇಖರ್ ಇಲಾಖೆಯ ಮಾಹಿತಿ ನೀಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ರಾಷ್ಟ್ರೀಯ ಹೆದ್ದಾರಿ ಎಇಇ ಶಿವಪ್ರಸಾದ್ ಅಜಿಲ, ತಹಸೀಲ್ದಾರ್ ಪಥ್ವಿ ಸಾನಿಕಮ್, ತಾಪಂ ಸಿಇಒ ಭವಾನಿ ಶಂಕರ್ ಉಪಸ್ಥಿತರಿದ್ದರು.
ಕಾಡಾನೆಯೊಂದಿಗೆ ಸೆಲ್ಫಿ!
ಚಾರ್ಮಾಡಿ ಘಾಟ್‌ನಲ್ಲಿ ಕಾಡಾನೆಯೊಂದಿಗೆ ಸೆಲ್ಫಿ ತೆಗೆದ ವಿಚಾರವಾಗಿ ಶಾಸಕರು ಪ್ರಶ್ನಿಸಿದರು. ತಕ್ಷಣ ಸೂಚನಾಫಲಕ ಅಳವಡಿಸಲಾಗುವುದು ಎಂದು ಅರಣ್ಯಾಧಿಕಾರಿ ತಿಳಿಸಿದರು. ಅರಣ್ಯದಂಚಿನಲ್ಲಿ ಕಾಡಾನೆ ಕೃಷಿಗೆ ಪ್ರತಿಬಾರಿ ಹಾನಿ ಮಾಡುತ್ತಿದೆ. ಇದಕ್ಕೆ ಶಾಶ್ವತ ಕ್ರಮ ಏನು ವಹಿಸಿದ್ದೀರಿ ಎಂದು ಶಾಸಕರು ಪ್ರಶ್ನಿಸಿದರು. ಆನೆಕಂದಕ ಹಾಗೂ ಸೋಲಾರ್ ಬೇಲಿ ವಿಸ್ತರಣೆಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು. ಮಳೆ ಹಿನ್ನೆಲೆ ಚಾರಣಿಗರು ಹಾಗೂ ಪ್ರವಾಸಿಗರಿಗೆ ಪ್ರವಾಸಿ ಸ್ಥಳಗಳ ವೀಕ್ಷಣೆ ನಿರ್ಬಂಧ ಕುರಿತು ಮಾಧ್ಯಮಕ್ಕೆ ವಾಹಿತಿ ನೀಡುವಂತೆ ಶಾಸಕರು ತಿಳಿಸಿದರು.