

ಕೆ.ಜಿ.ಎಫ್: ಸರ್ಕಾರಿ ಶಾಲೆಗಳ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯ ಸರ್ಕಾರ ಅಜೀಂ ಪ್ರೇಮ್ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ, ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣು ವಿತರಿಸುತ್ತಿದ್ದು, ಇದರ ಸದುಪಯೋಗ ಪಡೆದು ಶೈಕ್ಷಣಿಕವಾಗಿ ಸಾಧನೆ ಮಾಡಿ ಎಂದು ಕೆಜಿಎಫ್ ಶಾಸಕಿ ರೂಪಕಲಾ ತಿಳಿಸಿದರು.
ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸೋಮವಾರ ಕರ್ನಾಟಕ ಸರ್ಕಾರ ಹಾಗೂ ಅಜೀಂ ಪ್ರೇಮ್ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ವಾರದ ಎಲ್ಲ 6 ಶಾಲಾ ದಿನಗಳಲ್ಲಿಯೂ ಮೊಟ್ಟೆ, ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣು ವಿತರಿಸುವ ಕಾಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಹಿಂದೆ ವಾರದಲ್ಲಿ 2 ದಿನ ಮಕ್ಕಳಿಗೆ ಮೊಟ್ಟೆಯನ್ನು ರಾಜ್ಯ ಸರ್ಕಾರ ನೀಡುತ್ತಿತ್ತು. ಆದರೆ ಇದೀಗ ಅಜೀಂ ಪ್ರೇಮ್ಜಿ ಫೌಂಡೇಷನ್ ಉಳಿದ 4 ಶಾಲಾ ದಿನಗಳಲ್ಲೂ ಮೊಟ್ಟೆ ವಿತರಣೆಗೆ ಉದಾರ ರೂಪದಲ್ಲಿ 1,500 ಕೋಟಿ ರೂ. ಅನುದಾನ ನೀಡಿದ್ದು, ಇದೀಗ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಈ ಯೋಜನೆ ಜಾರಿಗೆ ಬಂದಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ ದಯಾಶಂಕರ್ ಮಾತನಾಡಿ, ಸರ್ಕಾರಿ ಶಾಲೆಗೆ ಬರುವುದು ಬಡ ಮಕ್ಕಳು ಅವರ ಆರೋಗ್ಯಕ್ಕಾಗಿ ಅಪೌಷ್ಟಿಕತೆ ನೀಗಲು ನೀಡಿರುವ ಈ ಸೌಲಭ್ಯ ಸದುಪಯೋಗವಾಗಲಿ, ಇದರಲ್ಲಿ ಯಾವುದೇ ತಪ್ಪು ಎಸಗದಂತೆ ಎಚ್ಚರವಹಿಸಿ ಎಂದು ಕೋರಿದರು.
ಕೆಜಿಎಫ್ ನಗರದಲ್ಲಿ ಶಾಸಕರ ಪ್ರಯತ್ನದಿಂದ ಶೀಘ್ರವೇ ಕೈಗಾರಿಕೆಗಳು ಆರಂಭಗೊಳ್ಳುತ್ತಿದ್ದು, ಇದರಿಂದ ಇಲ್ಲಿನ ಜನರ ನಿರುದ್ಯೋಗ ನಿವಾರಣೆಯಾಗಲಿದೆ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಪಾಲಕರ ಆಶಯದಂತೆ ಕಲಿಕೆಯಲ್ಲಿ ಆಸಕ್ತಿ ತೋರಿ ಎಂದರು.
ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಅನ್ನದಾಸೋಹದ ಜತೆಗೆ ಸರ್ಕಾರ ಇದೀಗ ವಾರದ 6ದಿನ ಮೊಟ್ಟೆ ವಿತರಣೆ ಮಾಡುತ್ತಿರುವುದರಿಂದ ಮಕ್ಕಳ ಉತ್ತಮ ಆರೋಗ್ಯದ ಜತೆಗೆ ಅವರ ಕಲಿಕೆಗೂ ಇದು ಸಹಕಾರಿಯಾಗಲಿದೆ ಎಂದು ಕೆಜಿಎಫ್ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ನಗರಸಭೆ ಸದಸ್ಯ ಪ್ರವಿಣ್ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯುವರಾಜ್, ಶಾಲೆಯ ಉಪ ಪ್ರಾಂಶುಪಾಲ ದಿನೇಶ್, ಶಾಸಕರ ಆಪ್ತ ಸಹಾಯಕ ಸೋಮಶೇಖರ್, ನೌಕರರ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ, ಪದಾಧಿಕಾರಿಗಳಾದ ಸುರೇಶ್, ಕೇಶವರೆಡ್ಡಿ, ಎಂ.ಶ್ರೀನಿವಾಸ್, ಆನಂದರೆಡ್ಡಿ, ಶಾಲೆಯ ಶಿಕ್ಷಕರಾದ ಅನುರಾಧ ಮುತಾಲಿಕ್, ಕವಿತಾ, ಕೋಮಲಾ, ಲೀಲಾವತಿ, ಮುಜಾಮಿಲ್, ಪ್ರೇಮವಾಣಿ, ಜೆ.ಕವಿತಾ ಇದ್ದರು.
30 ಕೆ.ಎಲ್.ಆರ್. 3
ಕೆಜಿಎಫ್ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕರ್ನಾಟಕ ಸರ್ಕಾರ ಹಾಗೂ ಅಜೀಂ ಪ್ರೇಮ್ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ವಾರದ ಎಲ್ಲ 6 ಶಾಲಾ ದಿನಗಳಲ್ಲಿಯೂ ಮೊಟ್ಟೆ ವಿತರಿಸುವ ಕಾಯಕ್ರಮಕ್ಕೆ ಚಾಲನೆ ನೀಡಿದ ಶಾಸಕಿ ರೂಪಕಲಾ ಅವರು ಮಕ್ಕಳೊಂದಿಗೆ ನೆಲದಲ್ಲಿ ಕುಳಿತು ಊಟ ಸವಿದರು.