

ತಿಪಟೂರು: ಭತ್ತ ಹಾಲ್ದುಂಬುವ ಹಂತಗಳಲ್ಲಿದ್ದು, ಕೊಳವೆ ಹುಳು ಹಾಗೂ ತೆನೆ ತಿಗಣೆ ಬಾಧೆ ಕಂಡು ಬಂದಿದೆ. ಇದರ ಹತೋಟಿ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಎನ್.ಕೆಂಗೇಗೌಡ ತಿಳಿಸಿದರು.
ಮದ್ಲೇಹಳ್ಳಿಯಲ್ಲಿ ಇತ್ತೀಚೆಗೆ ರೈತರ ತಾಕು(ಬೆಳೆ) ಪರಿಶೀಲಿಸಿ ಮಾತನಾಡಿ, ಕೊಳವೆ ಹುಳುವಿನ ಮರಿಹುಳು ಗರಿಗಳ ತುದಿ ಕತ್ತರಿಸಿ ಕೊಳವೆಗಳನ್ನು ನಿರ್ಮಿಸಿಕೊಳ್ಳುತ್ತವೆ. ಕೊಳವೆಯಲ್ಲಿ ಹಸಿರುಹುಳು ಹುಳು ಕೊಳವೆ ಸಮೇತ ಗರಿಗಳ ತಳಭಾಗಕ್ಕೆ ಅಂಟಿಕೊಂಡು ಗರಿಗಳನ್ನು ಕೆರೆದು ತಿನ್ನುತ್ತವೆ. ಅಂತಹ ಗರಿಗಳನ್ನು ವೀಕ್ಷಿಸಿದಾಗ ಏಣಿಯಾಕಾರದ ಗೆರೆಗಳು, ಹುಳುಬಿದ್ದ ಗದ್ದೆಯಲ್ಲಿ ಹಸಿರು ಕೊಳವೆಗಳು ನೀರಿನಲ್ಲಿ ತೇಲಾಡುತ್ತಿರುತ್ತವೆ. ಸಾಮಾನ್ಯವಾಗಿ ಕೊಕ್ಕರೆಗಳು ಹುಳುಬಿದ್ದ ಗದ್ದೆಯಲ್ಲಿರುತ್ತವೆ. ಈ ಕೀಟದ ಹತೋಟಿಗಾಗಿ ಆಸರೆ ಹುಲ್ಲು ಕಿತ್ತುಹಾಕಬೇಕು. ಗದ್ದೆ ನೀರಿನ ಮೇಲೆ ಸೀಮೆಎಣ್ಣೆಯನ್ನು ಅಲ್ಲಲ್ಲಿ ಸುರಿದು ಪೈರನ್ನು ಹಗ್ಗದಿಂದ ಅಲ್ಲಾಡಿಸಿದರೆ ಹುಳುಗಳು ನೀರಿಗೆ ಬಿದ್ದು ಸಾಯುತ್ತವೆ.
ಕೀಟದ ಹಾವಳಿ ತೀವ್ರವಾಗಿದ್ದಲ್ಲಿ ಕ್ವಿನಾಲ್‌ಫಾಸ್ 2.0 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬಹುದು. ಹಾಗೆಯೇ ಹಾಲ್ದುಂಬುವ ಹಂತದಲ್ಲಿ ತಿಳಿ ಹಸಿರು-ಕಂದು ಬಣ್ಣದ ದೊಣಿಯಾಕಾರದ ತೆನೆ ತಿಗಣೆ ತೆನೆ ಹಾಲ್ದುಂಬುವ ಸಮಯದಲ್ಲಿ ಕಾಳಿನಿಂದ ರಸ ಹೀರುತ್ತವೆ. ಅಂತಹ ಕಾಳುಗಳ ಮೇಲೆ ಕರಿ ಚುಕ್ಕೆ ನಂತರ ಚೀಕಲು ಕಾಳು ಅಥವಾ ಜಳ್ಳು ಕಾಳುಗಳು ಹೆಚ್ಚಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ಈ ಕೀಟದ ಪ್ರತೀ ತೆನೆಗೆ ಒಂದಕ್ಕಿಂತ ಜಾಸ್ತಿಯಿದ್ದಲ್ಲಿ ಮೆಲಾಥಿಯಾನ್ 50 ಇಸಿ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ 2.0 ಮಿ.ಲೀ ಬೆರೆಸಿ ಸಿಂಪಡಿಸಬಹುದು ಎಂದರು.
ನೊಣವಿನಕೆರೆ ಹೊಬಳಿ ನೆಲ್ಲಿಕೆರೆ ವ್ಯಾಪ್ತಿಯಲ್ಲಿ ಭತ್ತಕ್ಕೆ ಇಲಿಗಳಿಂದ ಹಾನಿಯಾಗಿದೆ. ಸಾಮಾನ್ಯವಾಗಿ ಇಲಿಗಳು ವಡೆ ಹಂತ ಅಥವಾ ಹಾಲ್ದುಂಬುವ ಹಂತದಲ್ಲಿ ಬದುಗಳ ಪಕ್ಕ ಹಾನಿ ಮಾಡದೇ ಗದ್ದೆಗಳ ಮಧ್ಯಭಾಗದಲ್ಲಿ ಅಲ್ಲಲ್ಲಿ ಬುಡದ ಭಾಗದ ಮೇಲೆ 450ಯಂತೆ ತೆಂಡೆಗಳನ್ನು ಕತ್ತರಿಸಿ ಹಾನಿ ಮಾಡುತ್ತವೆ. ಗದ್ದೆ ಸುತ್ತ ಹುಲ್ಲು ಜಾತಿಯ ಕಳೆಗಳನ್ನು ತೆಗೆದು ಸ್ವಚ್ಛವಾಗಿಡಬೇಕು, ಗದ್ದೆಗಳ ಸುತ್ತಲೂ ಬದುಗಳಿಗೆ ಹೊಂದಿಕೊಂಡಂತೆ ಪೊರೇಟ್ ಹರಳುಗಳನ್ನು ಹಾಕುವುದರಿಂದ ಇಲಿಗಳ ಸಂಚಾರ ತಡೆಗಟ್ಟಬಹುದು ಎಂದು ತಿಳಿಸಿದರು.