ಡೆಂಘೆ, ಕಾಲರಾ ನಿಯಂತ್ರಣಕ್ಕೆ ಕ್ರಮ

mysore city corporation
Published on

ಮೈಸೂರು: ಡೆಂಘೆ ಮತ್ತು ಕಾಲರಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಪಾಲಿಕೆ ಸೂಚಿಸಿದೆ.


ಈ ಕಾಯಿಲೆಗಳನ್ನು ಹರಡುವ ಈಡಿಸ್ ಈಜಿಪ್ಟ್ ಸೊಳ್ಳೆಯ ಉತ್ಪತ್ತಿಯು ಹೆಚ್ಚಾಗಿರುವ ಕಾರಣ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 65 ವಾರ್ಡ್‌ಗಳಲ್ಲಿ ಎಚ್ಚರ ವಹಿಸಬೇಕು. ಪ್ರತಿ ವಾರ್ಡ್‌ನಲ್ಲೂ ಸ್ವಚ್ಛತಾ ಕಾರ್ಯಕೈಗೊಂಡು ತ್ಯಾಜ್ಯ ವಿಲೇವಾರಿ ಮಾಡಬೇಕು ಎಂದು ಪಾಲಿಕೆಯ ಆಯುಕ್ತ ಅಶಾದ್ ಉರ್ ರೆಹಮಾನ್ ಶರೀಫ್ ತಿಳಿಸಿದ್ದಾರೆ.


ಡೆಂಘೆ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೈಯಿಂಗ್ ಯಂತ್ರದ ಮೂಲಕ ಸೊಳ್ಳೆ ನಿಯಂತ್ರಣ ಔಷಧ ಸಿಂಪಡಣೆ ಮಾಡಿಸುವುದು. ಪ್ರತಿ ಮನೆಗಳಿಗೆ ಭೇಟಿ ನೀಡಿ ಡೆಂೆ ರೋಗ ನಿಯಂತ್ರಣ ಕುರಿತಾದ ಕರಪತ್ರ ವಿತರಿಸಿ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ವಲಯ ಆಯುಕ್ತರು, ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರಿಗೆ ಸೂಚಿಸಲಾಗಿದೆ.


ಒಂದು ವೇಳೆ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ತೋರಿದಲ್ಲಿ ಸಂಬಂಧಪಟ್ಟ ಅಧಿಕಾರಿ ಅಥವಾ ಸಿಬ್ಬಂದಿಯನ್ನು ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.


ಜ್ವರದ ಲಕ್ಷಣಗಳು:


ಡೆಂಘೆ ಜ್ವರ ಈಡಿಸ್ ಈಜಿಪ್ಟ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ತೀವ್ರಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಹಾಗೂ ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸಾವ್ರ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸಾವ್ರದ ಗುರುತು ಕಾಣಿಸಿಕೊಳ್ಳುತ್ತದೆ.


ನಿಯಂತ್ರಣ ವಿಧಾನಗಳು:


ಎಲ್ಲ ನೀರಿನ ತೊಟ್ಟಿಗಳು, ಡ್ರಂ, ಬ್ಯಾರೆಲ್‌ಗಳು, ಏರ್ ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡಬೇಕು. ನೀರು ಖಾಲಿ ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚುವುದು, ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈಯರ್, ಎಳೆನೀರಿನ ಚಿಪ್ಪು, ಮರದ ಪೊಟರೆ, ಹೂವಿನ ಕಪಾಟು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಎಚ್ಚರ ವಹಿಸುವುದು.

ಸೂಕ್ತ ವಿಲೇವಾರಿ ಮಾಡುವುದು, ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆ ಬಳಸುವುದು, ಸೊಳ್ಳೆಗಳ ಕಚ್ಚುವಿಕೆಯಿಂದ ರಕ್ಷಣೆ ಪಡೆಯುವುದು. ಆರೋಗ್ಯ ಇಲಾಖೆ ಮತ್ತು ಮೈಸೂರು ಮಹಾನಗರ ಪಾಲಿಕೆಯಿಂದ ಹಮ್ಮಿಕೊಳ್ಳುವ ಸೊಳ್ಳೆ ನಿಯಂತ್ರಣ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದ್ದಾರೆ


ಮುನ್ನೆಚ್ಚರಿಕೆ ಕ್ರಮಗಳು:


ಸಾರ್ವಜನಿಕ ನೀರಿನ ಕೊಳಾಯಿ ಮತ್ತು ಕುಡಿಯುವ ನೀರನ್ನು ಸಂಗ್ರಹಿಸುವ ಸ್ಥಳವನ್ನು ಸ್ವಚ್ಛವಾಗಿಡುವುದು, ಕುದಿಸಿ ಆರಿಸಿದ ನೀರನ್ನೇ ಕುಡಿಯುವುದು, ಶುದ್ಧ ನೀರಿನ ಘಟಕದಲ್ಲಿನ ನೀರನ್ನು ಉಪಯೋಗಿಸುವುದು, ಹೋಟೆಲ್‌ಗಳಲ್ಲಿ ಕಡ್ಡಾಯವಾಗಿ ಕುಡಿಯಲು ಬಿಸಿ ನೀರನ್ನು ಗ್ರಾಹಕರಿಗೆ ನೀಡುವುದು, ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಪಾನಿಪುರಿ, ತಂಪು ಪಾನೀಯ ಮತ್ತು ಸೋಡಾ ಹಾಗೂ ಇತರ ಆಹಾರ ಪದಾರ್ಥಗಳನ್ನು ಸಾರ್ವಜನಿಕರು ಸಾಧ್ಯವಾದಷ್ಟು ಜಾಗೃತಿಯಿಂದ ಉಪಯೋಗಿಸಬೇಕು ಎಂದು ಹೇಳಿದ್ದಾರೆ.


ಊಟ ಮಾಡುವ ಮುನ್ನ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛಗೊಳಿಸಬೇಕು. ಹೋಟೆಲ್, ರೆಸ್ಟೋರೆಂಟ್, ಬೇಕರಿಗಳಲ್ಲಿ ಬಿಸಿಯಾದ ಆಹಾರ ಪದಾರ್ಥಗಳನ್ನೇ ಗ್ರಾಹಕರಿಗೆ ನೀಡುವುದು, ತಿಂಡಿ-ತಿನಿಸು ಮಾರಾಟ ಮಾಡುವ ಎಲ್ಲ ವ್ಯಾಪಾರಸ್ಥರು ಮತ್ತು ಹೋಟೆಲ್‌ನಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಕಡ್ಡಾಯವಾಗಿ ಸುರಕ್ಷಾ ಧಿರಿಸು ಧರಿಸಬೇಕು.

ರಸ್ತೆಬದಿ ತೆರೆದ ರೀತಿಯಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥ, ತಿಂಡಿ-ತಿನಿಸುಗಳು, ಕತ್ತರಿಸಿದ ಹಣ್ಣು ತಿನ್ನಬಾರದು, ಹೊರಗಡೆ ಬಂದಾಗ ಬಾಟಲ್‌ಗಳಲ್ಲಿ ನೀರನ್ನು ಸಂಗ್ರಹಿಸಿ ಸಾಧ್ಯವಾದಷ್ಟು ಮನೆಯ ನೀರನ್ನು ಬಳಸುವುದು, ಸಿದ್ಧಪಡಿಸಿದ ಆಹಾರ ಪದಾರ್ಥಗಳ ಮೇಲೆ ಕ್ರಿಮಿಕೀಟಗಳು ಕುಳಿತುಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಈ ಮಾರ್ಗಸೂಚಿಗಳನ್ನು ಪಾಲಿಸಿ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಸಾರ್ವಜನಿಕರು ಹೋಟೆಲ್ ಮಾಲೀಕರು ಮತ್ತು ಬೀದಿಬದಿ ವ್ಯಾಪಾರಸ್ಥರು ಸಾಂಕ್ರಾಮಿಕ ರೋಗಗಳು ಹರಡದಂತೆ ಸಹಕರಿಸುವಂತೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net