

ಲಿಂಗಸುಗೂರು: ಬೇಸಿಗೆಯಲ್ಲಿ ಪಟ್ಟಣದ 23 ವಾರ್ಡ್‌ಗಳಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಬಾಬುರಡ್ಡಿ ಮುನ್ನೂರು ಹೇಳಿದರು.
ಪಟ್ಟಣದ ಕಾಳಾಪುರ ರಸ್ತೆಯಲ್ಲಿನ ಕುಡಿವ ನೀರು ಸಂಗ್ರಹದ ಕೆರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ನಾರಾಯಣಪುರ ಬಲದಂಡೆ ನಾಲೆಯಿಂದ ಕೆರೆಗೆ ನೀರು ತುಂಬಿಸಲಾಗಿದೆ. ಮಾ.23 ಕ್ಕೆ ನೀರು ಸ್ಥಗಿತಗೊಳಿಸುವ ಮಾಹಿತಿ ಇದ್ದು, ಕೆರೆಗೆ ನಿರಂತರವಾಗಿ ನೀರು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮುಖ್ಯಾಧಿಕಾರಿ ರಡ್ಡಿ ರಾಯನಗೌಡ ಮಾತನಾಡಿ, ಕೆರೆಯಲ್ಲಿ ಈಗಾಗಲೇ 6.5 ಮೀ. ನೀರು ಸಂಗ್ರವಾಗಿದ್ದು, 8 ಮೋಟಾರ್ ಪಂಪ್‌ಗಳ ಮೂಲಕ ಬಲದಂಡೆ ನಾಲೆಯಿಂದ ನೀರು ಸಂಗ್ರಹಿಸಲಾಗುತ್ತಿದೆ. ಮೂರು ತಿಂಗಳು ಎಲ್ಲ ವಾರ್ಡ್‌ಗಳಿಗೆ ಮೂರು ದಿನಕ್ಕೆ ಒಂದು ಸಲ ನೀರು ಪೂರೈಸಲಾಗುವುದು. ಬೇಸಿಗೆ ಮುಗಿಯುವವರೆಗೆ ಕುಡಿವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪುರಸಭೆ ಸದಸ್ಯರಾದ ಯಮನಪ್ಪ ದೇಗುಲಮಡಿ, ಶರಣಪ್ಪ ಕೆಂಗೇರಿ, ನೌಕರ ಶಿವಲಿಂಗ ಮೇಗಳಮನಿ ಇತರರಿದ್ದರು.