

ಮೈಸೂರು: ನಗರ ಹೊರವಲಯದ ಕೆರೆಗಳಿಗೆ ಒಳಚರಂಡಿಯ ಕಲುಷಿತ ನೀರು ಸೇರುತ್ತಿದ್ದು, ಇದನ್ನು ತಡೆಯಲು 43.48 ಕೋಟಿ ರೂ. ವೆಚ್ಚದ ಎರಡು ಪ್ರತ್ಯೇಕ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರೀಗೌಡ ತಿಳಿಸಿದರು.
ನಗರದ ಹೊರವಲಯದ ಪೊಲೀಸ್ ಬಡಾವಣೆಯ ಕೆರೆ, ವರುಣ ಕೆರೆ, ಚಿಕ್ಕಹಳ್ಳಿಯ ಮಲೀನ ನೀರು, ವಸಂತನಗರ ವಾಟರ್ ಟ್ಯಾಂಕ್ ಹಾಗೂ ಮುಡಾ ಕಟ್ಟಡಗಳನ್ನು ಪರಿಶೀಲನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರದ ಹೊರವರ್ತುಲ ರಸ್ತೆಯ ತಿಪ್ಪಯ್ಯನಕೆರೆಗೆ ಕಲುಷಿತ ನೀರು ಸೇರುತ್ತಿದೆ. ಇದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸ್ವಾಧೀನದಲ್ಲಿ ಇದೆ. ಪೊಲೀಸ್ ಬಡಾವಣೆ ಸೇರಿದಂತೆ ಸುತ್ತಲಿನ ಬಡಾವಣೆಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ಸಮಸ್ಯೆ ನಿವಾರಣೆಗಾಗಿ 12.60 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾಯೋಜನೆಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.
ವರುಣ ಕೆರೆಗೂ ವಸಂತನಗರ, ನಾಡನಹಳ್ಳಿ, ಕೆ.ಬಿ.ಎಲ್.ಬಡಾವಣೆ, ಬುಗತಗಳ್ಳಿ, ಚಿಕ್ಕಹಳ್ಳಿ, ವಾಜಮಂಗಲ ಬಡಾವಣೆಗಳ ಒಳಚರಂಡಿಯ ಮಲೀನ ನೀರು ಹರಿದು ಬರುತ್ತಿದೆ. ಇದನ್ನು ತಡೆಯಲು 30.88 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿದ್ದು, ಮಲೀನ ನೀರು ಶುದ್ಧೀಕರಣ ಘಟಕ ನಿರ್ಮಾಣ ಇನ್ನಿತರ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಇತ್ತೀಚೆಗೆ ಕಲುಷಿತ ನೀರು ಕುಡಿದು ಜನರು ಅಸ್ವಸ್ಥಗೊಂಡ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಮುಡಾ ವ್ಯಾಪ್ತಿಯಲ್ಲಿ ಜಲಮೂಲ ಪರಿಶೀಲನೆ, ಲೋಪದೋಷಗಳನ್ನು ಸರಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಹಾಗಾಗಿ, ನಗರ ಪ್ರದಕ್ಷಣೆ ಹಾಕಿ ಪರಿಶೀಲನಾ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜೂ.26ರಂದು ಸಿಎಂ ಅಧ್ಯಕ್ಷತೆಯಲ್ಲಿ ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ಅವರ ಗಮನಕ್ಕೆ ತಂದು ಮುಡಾ ವ್ಯಾಪ್ತಿಯ ಮೂಲ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಹೊರವರ್ತುಲ ರಸ್ತೆ ಬದಿಯ ಕಸ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಡಾ ಮುಂದಾಗಿದ್ದು, ಈ ರಸ್ತೆ ಆಸುಪಾಸಿನ ಬಡಾವಣೆಗಳನ್ನು ಪಟ್ಟಣ ಪಂಚಾಯಿತಿ, ನಗರಸಭೆ ಸೇರಿದಂತೆ ಇನ್ನಿತರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ ಮಾಡಲಾಗುವುದು. ಅವುಗಳು ಆಯಾಯ ಬಡಾವಣೆಗಳ ಕಸ ನಿರ್ವಹಣೆ ಕೆಲಸ ಮಾಡಲಿವೆ. ದಸರಾ ಮುನ್ನವೇ ಈ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೊರವರ್ತುಲ ರಸ್ತೆ ವ್ಯಾಪ್ತಿಯಲ್ಲಿ ಬಡಾವಣೆಗಳು, ಮನೆಗಳು, ಜನಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ಕಸ ಸಮಸ್ಯೆ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ತ್ಯಾಜ್ಯವನ್ನು ಸಂಗ್ರಹಿಸಿ ಪಾಲಿಕೆಗೆ ನೀಡಲಾಗುತ್ತಿದೆ ಎಂದರು.
ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ಕಾರ್ಯದರ್ಶಿ ಡಿ.ಶೇಖರ್, ಎಸ್.ಇ. ಧರಣೇಂದ್ರಪ್ಪ, ಎಇಇ ಯಾದವಗಿರಿ ಇನ್ನಿತರರಿದ್ದರು