ನೀರಿನ ಬವಣೆ ನೀಗಿಸಲು ಕ್ರಮ

15KMD-1
ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಸೂಳೆಕೆರೆ ಜೀರ್ಣೋದ್ಧಾರ ಹಾಗೂ ನಾಲೆಗಳ ಅಭಿವೃದ್ಧಿ ಕಾಮಗಾರಿ ಕುರಿತು ರೈತರ ಸಮಾಲೋಚನಾ ಸಭೆಯನ್ನು ಕದಲೂರು ಉದಯ್ ಉದ್ಘಾಟಿಸಿದರು. ಬಿ.ಬಸವರಾಜು, ಹರೀಶ್‌ಬಾಬು, ಸಂದರ್ಶ, ನಂಜುಂಡೇಗೌಡ, ಪ್ರಶಾಂತ್ ಇತರರಿದ್ದರು.
Published on

ಕೆ.ಎಂ.ದೊಡ್ಡಿ : ಸೂಳೆಕೆರೆ ಅಚ್ಚುಕಟ್ಟು ವ್ಯಾಪ್ತಿಯ ರೈತರ ಬಾಳು ಹಸನಾಗಿಸುವ ನಿಟ್ಟಿನಲ್ಲಿ ಕೆರೆ ಮತ್ತು ನಾಲೆಗಳನ್ನು ಅಭಿವೃದ್ಧಿಪಡಿಸಿ ಕೊನೇ ಭಾಗದ ರೈತರ ನೀರಿನ ಬವಣೆ ನೀಗಿಸಲು ಕ್ರಮ ವಹಿಸುತ್ತಿದ್ದೇನೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.

ಸಮೀಪದ ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಸೂಳೆಕೆರೆ ಜೀರ್ಣೋದ್ಧಾರ ಹಾಗೂ ನಾಲೆಗಳ ಅಭಿವೃದ್ಧಿ ಕಾಮಗಾರಿ ಕುರಿತು ರೈತರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.

ಮದ್ದೂರು ತಾಲೂಕಿನಲ್ಲಿ ಶೇ.90 ರಷ್ಟು ಜನ ಕೃಷಿಯನ್ನೇ ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದು, ರೈತರ ಕಲ್ಯಾಣಕ್ಕೆ ಅನುಕೂಲವಾಗುವಂತೆ ಶಾಶ್ವತವಾಗಿ ನೀರಾವರಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸೂಳೆಕರೆ ಜೀರ್ಣೋದ್ಧಾರ ಮತ್ತು ನಾಲೆಗಳ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ತ್ವರಿತವಾಗಿ ನಿಗದಿತ ಸಮಯದಲ್ಲಿ ಕಾಮಗಾರಿ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದರು.

ಸೂಳೆಕೆರೆ ನಾಲಾ ಭಾಗದ ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ ಅಭಿವೃದ್ಧಿಗೆ ಸಹಕರಿಸಬೇಕು. ಅಲ್ಲದೆ ಕೆಲಸ ಆರಂಭಗೊಳ್ಳುತ್ತಿರುವುದರಿಂದ ರೈತರು ಯಾವುದೇ ಬೆಳೆಗಳನ್ನು ಹಾಕಬಾರದೆಂದು ಮನವಿ ಮಾಡಿದರು.

ಚಿಕ್ಕರಸಿನಕೆರೆ ಹೋಬಳಿಯ ರೈತರ ಜೀವನಾಡಿಯಾಗಿರುವ ಸೂಳೆಕೆರೆಯನ್ನು ಯಾವುದೇ ರಾಜಕೀಯ ಒತ್ತಡಗಳಿಗೆ ಒಳಗಾಗದೇ ರೈತರ ಒಳಿತಿಗಾಗಿ ಒತ್ತುವರಿ ತೆರವುಗೊಳಿಸಿ ಹೂಳೆತ್ತುವ ಹಾಗೂ ನಾಲೆಗಳ ಆಧುನೀಕರಣ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಿದ್ದು, ರೈತರು ಸಹಕಾರ ನೀಡಿ ಎಂದು ಮನವಿ ಮಾಡಿದರು.

ರೈತರ ಬೆಳೆಗಳಿಗೆ ಸಾಧ್ಯವಾದಷ್ಟು ಪ್ರಮಾಣದಲ್ಲಿ ನೀರನ್ನು ಪೂರೈಸುತ್ತೇವೆ ನಂತರದ ದಿನಗಳಲ್ಲಿ ರೈತರು ತಮ್ಮ ಬೆಳೆಗಳಿಗೆ ಪರ್ಯಾಯವಾಗಿ ಪಂಪ್‌ಸೆಟ್ ಹಾಗೂ ಇನ್ನಿತರ ಮೂಲಗಳಿಂದ ನೀರನ್ನು ಪೂರೈಕೆ ಮಾಡಿಕೊಂಡು ಈ ಬಾರಿಯ ಬೆಳೆಯನ್ನು ಉಳಿಸಿಕೊಂಡು ಅಭಿವೃದ್ಧಿಗೆ ಸಹಕರಿಸಿ. ಮುಂದಿನ ದಿನಗಳಲ್ಲಿ ರೈತರ ಬೆಳೆಗಳಿಗೆ ಸರಾಗವಾಗಿ ನೀರು ಲಭ್ಯವಾಗಲಿದೆ ಎಂದರು.

ರೈತ ಮುಖಂಡ ಕ್ಯಾತಘಟ್ಟ ಗಿರೀಶ್ ಮತನಾಡಿ, ನಾಲೆಗಳ ಪಕ್ಕದಲ್ಲಿ ಸರ್ವಿಸ್ ರಸ್ತೆ ಮಾಡಿ ಅನಗತ್ಯ ಮರಗಳನ್ನು ತೆರವುಗೊಳಿಸಿ ಕಡೇ ಭಾಗದ ರೈತರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ನಾಲೆ ಅಭಿವೃದ್ಧಿಪಡಿಸಿದರೆ ಕೊನೇ ಭಾಗಕ್ಕೆ ನೀರು ತಲುಪಿ ಆ ಭಾಗದ ರೈತರಿಗೆ ನೀರಿನ ಬವಣೆ ನೀಗಿಸಿದಂತಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕದಲೂರು ಉದಯ್, ನೀರಾವರಿ ಯೋಜನೆಯನ್ನು ಕೈಗೊಂಡಿರುವುದು ಶಾಶ್ವತ ಪರಿಹಾರ ಕೈಗೊಳ್ಳುವುದಕ್ಕಾಗಿ, ರೈತರಿಗೆ ಸ್ವಲ್ಪ ಸಮಸ್ಯೆಯಾದರೂ ಅದನ್ನೆಲ್ಲ ಬದಿಗೊತ್ತಿ ನನ್ನ ಜತೆ ಕೈ ಜೋಡಿಸಿದರೆ ನಾಲೆಗಳನ್ನು ಆಧುನೀಕರಣಗೊಳಿಸಿ ಸರ್ವಿಸ್ ರಸ್ತೆಗಳ ನಿರ್ಮಾಣ ಕಾಮಗಾರಿ ಆರಂಭಿಸಲು ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ತಲುಪುತ್ತಿವೆ. ಈ ನಿಟ್ಟಿನಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಿಯಾಗಿದೆ ಕ್ಷೇತ್ರದ ಜನತೆಯ ಕಲ್ಯಾಣಕ್ಕೆ ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು.

ರೈತರು ತಮ್ಮ ಕೃಷಿ ಚಟುವಟಿಕೆಗೆ ಅಧಿಕ ಪ್ರಮಾಣದಲ್ಲಿ ನೀರನ್ನು ಬಳಸಲಾಗುತ್ತಿದ್ದು, ಉತ್ತಮ ಬೆಳೆಗಳನ್ನು ಬೆಳೆಯಲು ರೈತರು ಕಡಿಮೆ ಪ್ರಮಾಣದಲ್ಲಿ ನೀರನ್ನು ಬಳಸಿದಾಗ ಮಾತ್ರ ಕೊನೇ ಭಾಗದ ರೈತರಿಗೆ ನೀರು ಸಮರ್ಪಕವಾಗಿ ದೊರೆಯುತ್ತದೆ. ರೈತರು ಕೃಷಿ ಪದ್ಧತಿಯಲ್ಲಿ ಬದಲಾವಣೆ ಅನುಸರಿಸಿ ಮಿಶ್ರ ಬೇಸಾಯ ಪದ್ಧತಿಯನ್ನು ಅನುಸರಿಸಿ ವಿವಿಧ ಸಾಂದರ್ಭಿಕ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.

ಕಿಡಿಗೇಡಿಗಳಿಂದ ರೈತರಿಗೆ ಅಸ್ಪಷ್ಟ ಸಂದೇಶ

ಕ್ಷೇತ್ರದ ಅಭಿವೃದ್ಧಿಯನ್ನು ಸಹಿಸದ ಕೆಲವು ಕಿಡಿಗೇಡಿಗಳು ರೈತರಿಗೆ ಅಸ್ಪಷ್ಟ ಸಂದೇಶಗಳನ್ನು ನೀಡುತ್ತಿದ್ದು ಆ ಸಂದೇಶಗಳಿಗೆ ಕಿವಿಗೊಡದೆ ಅಭಿವೃದ್ಧಿಗೆ ಹಾಗೂ ರೈತರ ಕಲ್ಯಾಣಕ್ಕೆ ಸಹಕರಿಸಿ ನಾನು ಎಂದಿಗೂ ರೈತರ ಪರವಾಗಿದ್ದು ಅವರ ಕಣ್ಣಲ್ಲಿ ನೀರು ಬರಬಾರದು. ಒಂದೇ ಬೆಳೆಗೆ ಸೀಮಿತವಾಗದೆ ಮಿಶ್ರ ಪದ್ಧತಿ ಬೇಸಾಯ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ. ಬಸವರಾಜು ಮಾತನಾಡಿ, ರೈತರು ನೀರಿಗಾಗಿ ಹೋರಾಟ ನಡೆಸಿರುವ ಐತಿಹಾಸಿಕ ಹೋರಾಟವನ್ನು ಹೊಂದಿರುವ ಜಿಲ್ಲೆಯಲ್ಲಿ ನಾವಿದ್ದೇವೆ. ಕ್ಷೇತ್ರದಲ್ಲಿ ಅಭಿವೃದ್ಧಿ ಪರ ರೈತರ ಹಿತ ಕಾಯುವ ಶಾಸಕನನ್ನು ಆಯ್ಕೆ ಮಾಡಿದ್ದು ರಾಜ್ಯದಲ್ಲಿ ಯಾವೊಬ್ಬ ಶಾಸಕ ಒಂದು ಕೆರೆಗೂ 84 ಕೋಟಿ ರೂ. ಅನುದಾನ ತಂದಿರುವ ಇತಿಹಾಸ ಇಲ್ಲ. ಅಂತಹ ರೈತಪರ ಕಾಳಜಿ ಇರುವ ಶಾಸಕರು ನಮಗೆ ಸಿಕ್ಕಿರುವುದು ನಮ್ಮ ಜನರ ಪುಣ್ಯ ಎಂದರು.

ಮನ್‌ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ನಂಜುಂಡೇಗೌಡ, ಎಇಇ ಪ್ರಶಾಂತ್, ಎಇ ಅವಿನಾಶ್, ಗ್ರಾ.ಪಂ. ಅಧ್ಯಕ್ಷೆ ಕಮಲಮ್ಮ ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಮುಟ್ಟನಹಳ್ಳಿ ಚಂದ್ರು, ಡಿ.ಎ.ಕೆರೆ ರಘು, ದೇವರಹಳ್ಳಿ ದೊಡ್ಡೇಗೌಡ, ಗಿರೀಶ್ ಕ್ಯಾತಘಟ್ಟ, ಶಿವಲಿಂಗಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net