

ಕಾರ್ಕಳ: ಕರಾವಳಿ ಭಾಗದ ಜನರಿಗೆ ಎದುರಾಗಿರುವ ಮರಳು ಸಮಸ್ಯೆ ನಿವಾರಿಸಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ನಿಯಮ ಸರಳವಾಗಿಸುವ ಮೂಲಕ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತದೆ. ಈ ಸಂಬಂಧ ಜ.7ರಂದು ಮಂಗಳೂರಿನಲ್ಲಿ ಉಭಯ ಜಿಲ್ಲೆಗಳ ಶಾಸಕರ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ ಪಾಟೀಲ ಹೇಳಿದರು.
ಕಾರ್ಕಳದಲ್ಲಿ ಮರಳು ಮತು ಗಣಿಗಾರಿಕೆಗೆ ಸಂಬಂಧಿಸಿ ಶಾಸಕರು, ಜನಪ್ರತಿನಿಧಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ 8.55 ಲಕ್ಷ ಮೆಟ್ರಿಕ್ ಟನ್ ಮರಳನ್ನು ಸಿಆರ್‌ಜಡ್ ವ್ಯಾಪ್ತಿಯಲ್ಲಿ ಸಂಗ್ರಹಿಸಿ ಮಾರಾಟಕ್ಕೆ ಅನುಮತಿ ನೀಡಿದ್ದೇವೆ. 10 ಸಾವಿರ ಮೆಟ್ರಿಕ್ ಟನ್‌ಗಿಂತ ಮೇಲ್ಪಟ್ಟ 21 ಬ್ಲಾಕ್‌ಗಳನ್ನು ಈಗಾಗಲೇ ಗುರುತಿಸಿ ಟೆಂಡರ್ ಕರೆಯಲಾಗಿದೆ. ಎರಡೂವರೆ ವರ್ಷದಿಂದ ಇದು ಬಾಕಿಯಾಗಿದ್ದ ಸಿಆರ್‌ಜಡ್ ವ್ಯಾಪ್ತಿಯ ತೊಂದರೆಗಳನ್ನು ನಿವಾರಿಸಿದ್ದೇವೆ ಎಂದರು.
ನಾನ್ ಸಿಆರ್‌ಜಡ್ ವ್ಯಾಪ್ತಿಯ 34 ಗ್ರಾಪಂಗಳಲ್ಲಿ ಫಲಾನುಭವಿಗಳಿಗೆ ನೇರ ಮರಳು ತೆಗೆಯಲು ಮತ್ತು 21 ಮರಳು ಬ್ಲಾಕ್‌ಗಳಲ್ಲಿ ಎಂಎಂಎನ್ ಮೂಲಕ ತೆಗೆಯಲು ಅವಕಾಶ ನೀಡಲಾಗಿದೆ. 3 ಹಂತಗಳಲ್ಲಿ ಸ್ಥಳೀಯ ಬಳಕೆದಾರರು ಮನೆ ಇತ್ಯಾದಿ ಕಟ್ಟಡಗಳ ನಿರ್ಮಾಣಕ್ಕೆ ಮರಳು ಪಡೆಯಬಹುದು. ಅಧಿಕಾರಿಗಳಿಂದ ತೊಂದರೆಯಾಗುವುದಿಲ್ಲ. ಪಂಚಾಯಿತಿಗೆ ರಾಜಧನವೂ ಸಂಗ್ರಹವಾಗುತ್ತದೆ. ಆರ್ಥಿಕವಾಗಿಯೂ ಲಾಭವಾಗುತ್ತದೆ ಎಂದರು.
ಶಾಸಕರಾದ ವಿ.ಸುನೀಲ್‌ಕುಮಾರ್, ರಘುಪತಿ ಭಟ್, ತಾಪಂ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಜಿಪಂ ಸದಸ್ಯರಾದ ಸುಮಿತ್ ಶೆಟ್ಟಿ, ಉದಯ ಎಸ್.ಕೊಟ್ಯಾನ್ ಇರ್ವತ್ತೂರು, ತಾಪಂ ಮಾಜಿ ಉಪಾಧ್ಯಕ್ಷ ಹರೀಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಲೈಸೆನ್ಸ್ ಅವಧಿ ಹೆಚ್ಚಳ: ಉಡುಪಿ ಜಿಲ್ಲೆಯಲ್ಲಿ 37 ಕ್ರಶರ್ ಮಾಲೀಕರು ಪ್ರತೀ 5 ವರ್ಷಕ್ಕೊಮ್ಮೆ ಲೈಸೆನ್ಸ್ ನವೀಕರಣಗೊಳಿಸುವ ನಿಯಮವಿತ್ತು. ಈಗ ಲೈಸೆನ್ಸ್ ಅವಧಿಯನ್ನು 20 ವರ್ಷಕ್ಕೆ ಏರಿಸಲಾಗಿದ್ದು, ವಿಧಾನಸಭೆಯಲ್ಲಿ ಅನುಮತಿ ಸಿಕ್ಕಿದೆ ಎಂದು ಸಚಿವರು ತಿಳಿಸಿದರು.