

ಹೊಸಕೋಟೆ : ಬೇಸಿಗೆಗೂ ಮುನ್ನವೇ ನಗರದಲ್ಲಿ ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದ್ದು, ಸದ್ಯ ಬೆಸ್ಕಾಂ ಲೋಡ್ ಶೆಡ್ಡಿಂಗ್ನಿಂದ ನೀರು ಸರಬರಾಜು ಮಾಡುವುದು 8 ದಿನ ಮೀರುತಿದೆ ಎಂದು ನಗರಸಭೆ ಅಧ್ಯೆ ಆಶಾ ರಾಜ್ಶೇಖರ್ ತಿಳಿಸಿದರು.
ನಗರಸಭೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ನಗರಸಭೆ ಆಯುಕ್ತರು ಹಾಗೂ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದರು.
ನಗರಸಭೆ ಆಯುಕ್ತ ನೀಲಾಲೋಚನ ಪ್ರಭು ಮಾತನಾಡಿ, ನಗರಸಭೆ ವತಿಯಿಂದ 20 ಲಕ್ಷ ರೂ. ವೆಚ್ಚದ ನೀರು ಸರಬರಾಜು ಪರಿಕರಗಳನ್ನು ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ನಗರದಲ್ಲಿ ಸದ್ಯ ನೀರು ಸರಬರಾಜು ಮಾಡಲು ವಿದ್ಯುತ್ ಸಮಸ್ಯೆ ಇರುವುದರಿಂದ ಈ ಬಗ್ಗೆ ಸಭೆಗೆ ಬೆಸ್ಕಾಂ ಅಧಿಕಾರಿಗಳನ್ನು ಆಹ್ವಾನಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಬೆಸ್ಕಾಂ ಅಧಿಕಾರಿ ಅನಂತ ಮೂರ್ತಿ ಮಾತನಾಡಿ, ನಗರಕ್ಕೆ ಸದ್ಯ 32 ಮೆಗಾವಾಟ್ ವಿದ್ಯುತ್ ಸರಬರಾಜಿನ ಸಾಮರ್ಥ್ಯವಿದೆ. ಆದರೆ ಬೇಡಿಕೆ 38 ಮೆಗಾವಾಟ್ ಇದ್ದು, ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯಾಗುತ್ತಿದೆ. ಪ್ರತಿ ದಿನ ಎರಡು ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುತಿದ್ದು, ನೀರು ಸರಬರಾಜು ಕೇಂದ್ರಕ್ಕೆ ನಿರಂತರ ವಿದ್ಯುತ್ಗೆ ಅಗತ್ಯವಿದೆ, ಆ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ನೋಡಿಕೊಳ್ಳಲಾಗುವುದು ಹಾಗೂ ವಾರ್ಡ್ಗಳಿಗೆ ನೀರು ಹರಿಸುವ ಸರತಿ ವಿವರವನ್ನು ಬೆಸ್ಕಾಂ ಅಧಿಕಾರಿಗಳೊಂದಿಗೆ ಹಂಚಿಕೊಂಡಲ್ಲಿ ಆ ಭಾಗದಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.
ವಿದ್ಯುತ್ ಸಮಸ್ಯೆ ನೀಗಿಸಲು ಇಲಾಖೆ ಒಪ್ಪಿಗೆ ನೀಡಿದ್ದು, ನಗರದಲ್ಲಿ ನೀರು ಸರಬರಾಜಿನಲ್ಲಿದ್ದ ಸಮಸ್ಯೆ ಬಗೆಹರಿಸಿ, ನಗರದ ಹೊರವಲಯದಲ್ಲಿರುವ ಅಮಾನಿಕೆರೆಯಲ್ಲಿ ನೀರು ಕಡಿಮೆ ಇರುವ ಕಾರಣ ಕೆರೆಯಲ್ಲಿ ಕೆಟ್ಟು ನಿಂತಿರುವ ಕೊಳವೆ ಬಾವಿಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಮಣ್ಣಿನ ರಸ್ತೆ ನಿರ್ಮಾಣ ಮಾಡಿ ರಿಪೇರಿ ಮಾಡಲಾಗುವುದು. | ಆಶಾ ರಾಜಶೇಖರ್ ಅಧ್ಯೆ, ಹೊಸಕೋಟೆ ನಗರಸಭೆ
ಹೊಸಕೋಟೆ : ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ದೇವರಾಜ್ ಕೊನೆಗೂ ಯಶಸ್ವಿಯಾಗಿದ್ದಾರೆ.
ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹಾಗೂ ಯೋಜನಾ ಪ್ರಾಧಿಕಾರಕ್ಕೆ ನಗರಸಭೆ ಚುನಾಯಿತ ಪ್ರತಿನಿಧಿ ನೇಮಕ ಮಾಡುವ ಸಲುವಾಗಿ ನಗರಸಭೆ ಆವರಣದಲ್ಲಿ ಅಧ್ಯೆ ಆಶಾರಾಜಶೇಖರ್ ಸಮ್ಮುಖದಲ್ಲಿ ಬುಧವಾರ ಸಭೆ ಕರೆಯಲಾಗಿತ್ತು. ದೇವರಾಜ್ ಅವರನ್ನು ಯೋಜನಾ ಪ್ರಾಧಿಕಾರಕ್ಕೆ ನೇಮಕ ಮಾಡಿ ಆದೇಶ ಹೊರಡಿಸಿದಾಗ, ದೇವರಾಜ್ ನನಗೆ ಈ ಸ್ಥಾನ ಬೇಡವೆಂದರು. ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಬಸವರಾಜ್ ಅವರನ್ನು ನೇಮಕ ಮಾಡಿದ್ದರಿಂದ ಉಂಟಾದ ಗೊಂದಲದಿಂದ ಕೊನೆಗೆ ದೇವರಾಜ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬದಲಿಸಿ ಯೋಜನಾ ಪ್ರಾಧಿಕಾರಕ್ಕೆ ಬಸವರಾಜ್ ಅವರನ್ನು ನೇಮಕ ಮಾಡಿದ್ದರಿಂದ ಅವರೂ ಹುದ್ದೆ ನಿರಾಕರಿಸಿ ಸಭೆಯ ನಂತರ ನಿರ್ಗಮಿಸಿದರು.