

ಹುಬ್ಬಳ್ಳಿ: ಮಜೇಥಿಯಾ ಫೌಂಡೇಶನ್ ನೇತೃತ್ವದಲ್ಲಿ ಜೂನ್ 16ರಂದು ಕೃತಕ ಕಾಲು, ಕೈ ಅಳತೆ ತೆಗೆದುಕೊಳ್ಳುವುದು ಹಾಗೂ ಜುಲೈ 28ರಂದು ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಯುವರ್ ಫೂಟ್ ಇನ್ ಯುವರ್ ವೇಸ್ ಪ್ರಾಸ್ತೋಟಿಕ್ ಆ್ಯಂಡ್ ಆರ್ಥೋಟೆಕ್ ಸೆಂಟರ್ ಮುಖ್ಯಸ್ಥ ಶಂಕರ ಕಾಮಟೆ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 16ರಂದು ಮೂರುಸಾವಿರಮಠದ ಆವರಣದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಅಂಗವಿಕಲರಿಂದ ಅಳತೆ ಪಡೆಯಲಾಗುವುದು ಎಂದರು.
ಎರಡನೇ ಹಂತದಲ್ಲಿ ಜು. 28ರಂದು ಮೂರು ಸಾವಿರ ಮಠದ ಆವರಣದಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣೆ ಹಾಗೂ ಅದನ್ನು ಉಪಯೋಗಿಸಿಕೊಳ್ಳುವ ಬಗ್ಗೆ ತರಬೇತಿ ನೀಡಲಾಗುವುದು. 175 ಫಲಾನುಭವಿಗಳಿಗೆ ಕೃತಕ ಕಾಲು ಜೋಡಿಸಲಾಗುತ್ತಿದೆ. ಈಗಾಗಲೇ 100 ಜನ ಆಸಕ್ತರು ಹೆಸರು ನೋಂದಾಯಿಸಿದ್ದು, ಶಿಬಿರದಲ್ಲಿ 150ರಿಂದ 180 ಅಂಗವಿಕಲರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಫೌಂಡೇಷನ್ ಟ್ರಸ್ಟಿ ಡಾ.ವಿ.ಬಿ. ನಿಟಾಲಿ ಮಾತನಾಡಿ, ಫೌಂಡೇಷನ್ ವತಿಯಿಂದ ಯುವಕ-ಯುವತಿಯರಿಗೆ ನವನಗರ ಕ್ಯಾನ್ಸರ್ ಆಸ್ಪತ್ರೆ ಆವರಣದಲ್ಲಿರುವ ಹಾಸ್ಪೈಸ್ ರಮಿಲಾ ಪ್ರಶಾಂತಿ ಮಂದಿರದಲ್ಲಿ ಉಚಿತ ಹೋಮ್ ನಸಿರ್ಂಗ್ ತರಬೇತಿ ನೀಡಲು ಯೋಜಿಸಲಾಗಿದೆ. ಜುಲೈ 1ರಿಂದ ಮೂರು ತಿಂಗಳವರೆಗೆ ಉಚಿತ ತರಬೇತಿ ನೀಡಲಾಗುವುದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತಿದ್ದು, ಆಸಕ್ತರು ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಪೂರೈಸಿರಬೇಕು. 16ರಿಂದ 40 ವರ್ಷದವರಿಗೆ ಅವಕಾಶ ಕಲ್ಪಿಸಲಾಗುವುದು. ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆ ನೀಡಲಾಗುವುದು. ಮೊದಲ ಬಾರಿ 10 ರಿಂದ 15 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಆಸಕ್ತರು ಮೊ.ಸಂ. 93417 98093ಗೆ ಸಂಖ್ಯೆ ಸಂಪರ್ಕಿಸಬಹುದು ಎಂದರು.
ಫೌಂಡೇಶನ್ ವತಿಯಿಂದ ಉಚಿತ ಹೋಮ್ ಮೆಡಿಕಲ್ ಉಪಕರಣ ಕೊಡಲಾಗುತ್ತಿದೆ. ಈ ಉಪಕರಣ ಬೇಕಾದಲ್ಲಿ ದೂ.ಸಂ. 0836 4850901ಗೆ ಸಂಪರ್ಕಿಸಬಹುದು ಎಂದರು.
ಫೌಂಡೇಷನ್ ಸಿಇಒ ಸುನೀಲಕುಮಾರ, ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಟ್ರಸ್ಟಿಗಳಾದ ಅಮೃತಭಾಯ್ ಪಟೇಲ್, ದಾಯಾ ಭಾಯ್ ಪಟೇಲ್ ಸುದ್ದಿಗೋಷ್ಠಿಯಲ್ಲಿದ್ದರು.