

ಮಂಡ್ಯ: ಈ ವರ್ಷ ಜನವರಿಯಿಂದ ಜೂನ್ ಅಂತ್ಯದವರೆಗೆ 81 ಮಕ್ಕಳ ಮಾದರಿಯನ್ನು ಪರಿಶೀಲನೆಗೆ ಲ್ಯಾಬ್‌ಗೆ ಕಳುಹಿಸಿಕೊಡಲಾಗಿತ್ತು. ಅದರಲ್ಲಿ 20 ದಡರಾ ಹಾಗೂ 2 ರುಬೆಲ್ಲಾ ಪ್ರಕರಣಗಳು ಖಚಿತವಾಗಿದ್ದು, ಅವರಿಗೆ ಚಿಕಿತ್ಸೆ ನೀಡಿ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಆರೋಗ್ಯ ಇಲಾಖೆಯ ದಡರಾ-ರುಬೆಲ್ಲಾ ನಿರ್ಮೂಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಲ್ಲಿ ಜ್ವರ ಹಾಗೂ ದೇಹದ ಮೇಲೆ ಕೆಂಪು ಮಚ್ಚೆಗಳು ಕಂಡುಬಂದಲ್ಲಿ ತಕ್ಷಣ ತಪಾಸಣೆಗೆ ಒಳಪಡಿಸಬೇಕು. ಅಂತೆಯೇ ದಡಾರ ಮತ್ತು ರುಬೆಲ್ಲಾ ಲಸಿಕೆಯನ್ನು ಮಕ್ಕಳಿಗೆ 9 ತಿಂಗಳು ಹಾಗೂ 16ನೇ ತಿಂಗಳ ಅವಧಿಯಲ್ಲಿ ನೀಡಲಾಗುವುದು. ಪಾಲಕರು ತಪ್ಪದೇ ಮಕ್ಕಳಿಗೆ ಲಸಿಕೆ ಕೊಡಿಸುವುದರ ಮೂಲಕ ದಡಾರ ಮತ್ತು ರುಬೆಲ್ಲಾ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಹೆರಿಗೆಯ ಸಂದರ್ಭದಲ್ಲಿ ತಾಯಿ ಮಂಡ್ಯ ಜಿಲ್ಲೆಯಲ್ಲಿದ್ದು, ನಂತರ ಬೇರೆ ಜಿಲ್ಲೆ ಅಥವಾ ಸ್ಥಳಕ್ಕೆ ತೆರಳಿದರೆ ಲಸಿಕೆ ಪಡೆದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಲಸಿಕೆ ಕುರಿತಂತೆ ಅಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಹೆಚ್ಚಿನ ಜಾಗೃತಿ ವಹಿಸಬೇಕು. ವಿವಿಧ ಕಾರಣಗಳಿಂದ ಲಸಿಕೆಯಿಂದ ವಂಚಿತರಾದ ಮಕ್ಕಳಿಗೆ ಜಿಲ್ಲೆಯಲ್ಲಿ ಮೂರು ಹಂತದಲ್ಲಿ ಮಿಷನ್ ಇಂದ್ರಧನುಷ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ.7 ರಿಂದ 12, ಸೆ.11ರಿಂದ 16 ಮತ್ತು ಅ.9 ರಿಂದ 14 ರವರಗೆ ಮೂರು ಹಂತದಲ್ಲಿ ನಡೆಯಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಇಂದ್ರಧನುಷ್ ಕಾರ್ಯಕ್ರಮಕ್ಕೆ ಮೊದಲು ಲಸಿಕೆಯಿಂದ ವಂಚಿತವಾಗಿರುವ ಮಕ್ಕಳನ್ನು ಗುರುತಿಸುವಿಕೆ ಅತಿ ಮುಖ್ಯ. ಆದ್ದರಿಂದ ಮನೆ ಮನೆ ಸಮೀಕ್ಷೆ ನಡೆಸಿ, ತಾಯಿ ಕಾರ್ಡ್ ಪರಿಶೀಲಿಸಿ. ಮಗು ಯಾವುದೇ ಲಸಿಕೆಯಿಂದ ವಂಚಿತವಾಗಿದ್ದಾರೆ ಪಟ್ಟಿಮಾಡಬೇಕು. ಮಾತ್ರವಲ್ಲದೆ ಮಗು ಲಸಿಕೆ ಪಡೆಯುವಂತೆ ನೋಡಿಕೊಳ್ಳಿ ಎಂದರು.
ಲಸಿಕಾಕರಣ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಹೆಚ್ಚಿನ ಜಾಗೃತಿ ಮೂಡಿಸಿ. ಮುಖ್ಯವಾಗಿ ಹೈರಿಸ್ಕ್ ಸ್ಥಳ, ವಲಸೆ ಕಾರ್ಮಿಕರು ವಾಸಿಸುವ ಸ್ಥಳ, ಸ್ಲಂಗಳು, ಕ್ವಾರಿ ಕೆಲಸಗಾರರು ಇರುವ ಸ್ಥಳಗಳಲ್ಲಿ ಸಮೀಕ್ಷೆಯನ್ನು ನಡೆಸಿ. ನಗರ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ ವಾಹನಗಳಲ್ಲಿ ಕಾರ್ಯಕ್ರಮದ ವಿವರದ ಪ್ರಚಾರ ನೀಡಬೇಕು. ಗ್ರಾಮ ಸಭೆ, ಸ್ತ್ರೀಶಕ್ತಿ ಗುಂಪು, ಅಂಗನವಾಡಿ ಕೇಂದ್ರಗಳಲ್ಲಿ ಜನರಿಗೆ ಮಾಹಿತಿಯನ್ನು ತಲುಪಿಸುವ ಕೆಲಸವಾಗಬೇಕು. ಕೋವಿಡ್ ಸಂದರ್ಭದಲ್ಲಿ ಲಸಿಕೆ ಪಡೆದ ನಂತರ ಕೋವಿನ್ ಆ್ಯಪ್‌ನಲ್ಲಿ ಯಾವ ರೀತಿ ಪ್ರಮಾಣಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿತ್ತು. ಅದೇ ರೀತಿ ಯು-ವಿನ್ ಆ್ಯಪ್‌ನಲ್ಲಿ ತಾಯಿ ಅಥವಾ ತಂದೆ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಕೊಂಡು ಮಗುವಿಗೆ ಲಸಿಕೆ ನೀಡಿದ ನಂತರ ವಿವರದ ಸರ್ಟಿಫಿಕೇಟ್‌ನ್ನು ಪಡೆದುಕೊಳ್ಳಬಹುದು ಎಂದು ವಿವರಿಸಿದರು.
ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ.ಸುಧೀರ್‌ನಾಯಕ್ ಜಿಲ್ಲೆಯಲ್ಲಿ ಮಿಷನ್ ಇಂದ್ರಧನುಷ್ ಅನುಷ್ಠಾನದ ರೂಪುರೇಷೆ ಕುರಿತು ವಿವರಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ರಾಜಮೂರ್ತಿ, ಜಿಲ್ಲಾ ಲಸಿಕಾಧಿಕಾರಿ ಡಾ.ಅನಿಲ್ಕುಮಾರ್, ಡಿಡಿಪಿಐ ಶಿವರಾಮೇಗೌಡ, ಕುಟುಂಬ ಕಲ್ಯಾಣಾಧಿಕಾರಿ ಡಾ.ಶಶಿಧರ್ ಇತರರಿದ್ದರು.