

ಸವಣೂರ: ದಾರ್ಶನಿಕರ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ನೇಕಾರ ಸಮುದಾಯದ ಪ್ರಮುಖರು ಹೆಚ್ಚಿನ ಆಸಕ್ತಿ ತೋರುತ್ತಿರುವುದು ಸಂತಸ ಸಂಗತಿ ಎಂದು ತಹಸೀಲ್ದಾರ್ ಭರತರಾಜ್ ಕೆ.ಎನ್. ಹೇಳಿದರು.
ಪಟ್ಟಣದ ಉಪ ವಿಭಾಗಾಧಿಕಾರಿ ಕಚೇರಿ ಸಭಾ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ದೇವರ ದಾಸಿಮಯ್ಯ ಜಯಂತಿ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏ. 2ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಡಾ.ವಿ.ಕೃ. ಗೋಕಾಕ ಸಾಂಸ್ಕೃತಿಕ ಸಭಾ ಭವನದಲ್ಲಿ ಸಮಾರಂಭ ಆಯೋಜಿಸಲಾಗುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿರುವವರನ್ನು ಸನ್ಮಾನಿಸಲಾಗುವುದು. ಬುಧವಾರ ಪೇಟೆಯ ರಾಮಲಿಂಗೇಶ್ವರ ಹಾಗೂ ಈಶ್ವರ ದೇವಸ್ಥಾನದಿಂದ ಶಿವಶರಣ ದೇವರ ದಾಸಿಮಯ್ಯನವರ ಭಾವಚಿತ್ರ ಮೆರವಣಿಗೆ ನಡೆಸಲಾಗುವುದು. ಎಲ್ಲ ಇಲಾಖೆ ಅಧಿಕಾರಿಗಳು ಸಮಾರಂಭದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಗೈರಾಗುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ದೇವಾಂಗ ಸಮಾಜದ ಅಧ್ಯಕ್ಷ ಈರಣ್ಣ ಗುಡಿಸಾಗರ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಜಯಂತಿ ಆಚರಣೆಗೆ ಘೊಷಿಸಿರುವ ಅನುದಾನ ಬಿಡುಗಡೆಯಾಗಿಲ್ಲ. ಹೀಗೆ ಮುಂದುವರಿದರೆ ಸಮಾಜ ಬಾಂಧವರು ಸೇರಿ ಸಮಾರಂಭ ಆಯೋಜಿಸುವುದು ಅನಿವಾರ್ಯವಾಗಲಿದೆ ಎಂದರು.
ಸಿಡಿಪಿಒ ಉಮಾ ಕೆ.ಎಸ್., ಸಹಾಯಕ ಕೃಷಿ ನಿರ್ದೇಶಕಿ ಸವಿತಾ ಚಕ್ರಸಾಲಿ, ಪುರಸಭೆ ವ್ಯವಸ್ಥಾಪಕ ಮಹೇಶ ದೊಡ್ಡಣ್ಣನವರ, ಚನ್ನಪ್ಪಗೌಡ ಗುಡಿಸಾಗರ, ಈರಣ್ಣಗೌಡ ಗುಡಿಸಾಗರ, ರಮೇಶಗೌಡ ಗುಡಿಸಾಗರ, ಸಂತೋಷ ಗುಡಿಸಾಗರ, ದೇವಾಂಗ ಸಮಾಜದ ಮಹಿಳಾ ಸಂಘಟನೆ ಪದಾಧಿಕಾರಿಗಳು ಇತರರಿದ್ದರು.