

ಹುಣಸೂರು: ಮಂಗಳಮುಖಿಯರಿಂದ ರಾಖಿ ಕಟ್ಟಿಸಿಕೊಳ್ಳುವ ಮೂಲಕ ಜನಧ್ವನಿ ಫೌಂಡೇಶನ್‌ನ ಸದಸ್ಯರು ಶನಿವಾರ ರಕ್ಷಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ತಾಲೂಕಿನ ಬಿಳಿಕೆರೆ ಹೋಬಳಿ ವ್ಯಾಪ್ತಿಯ ವಿವಿಧೆಡೆ ಮಂಗಳಮುಖಿಯರ ಬಳಿ ತೆರಳಿದ ಫೌಂಡೇಶನ್ ಸದಸ್ಯರು ರಾಖಿ ಕಟ್ಟಿಸಿಕೊಂಡು ಶುಭಕೋರಿದರು.
ಈ ವೇಳೆ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ಪ್ರವೀಣ್ ಪಿ.ಆಯರಹಳ್ಳಿ, ಅಣ್ಣತಂಗಿಯರ ಸಂಬಂಧಗಳನ್ನು ಬೆಸೆಯುವ ರಕ್ಷಾಬಂಧನ ಆಚರಣೆ ನಮ್ಮ ಸಮುದಾಯದಲ್ಲಿರುವ ತೃತೀಯ ಲಿಂಗಿಗಳನ್ನು ಒಳಗೊಳ್ಳಬೇಕಿದೆ. ಮಂಗಳಮುಖಿಯರನ್ನು ಕನಿಷ್ಠ ದೃಷ್ಟಿಯಿಂದ ನೋಡುವ ಪ್ರವೃತ್ತಿ ಹೋಗಬೇಕಿದೆ. ತಾವುಗಳು ಏಕಾಂಗಿಗಳು, ಅನಾಥರು ಎನ್ನುವ ಮನೋಭಾವನೆ ಅವರಿಂದ ದೂರಾಗಬೇಕಿದೆ. ಅವರು ನಮ್ಮಂತೆ ಮನುಷ್ಯರಾಗಿದ್ದು, ಈ ಸಮಾಜದಲ್ಲಿ ಗೌರವಯುತವಾಗಿ ಬಾಳಲು ನಾವೆಲ್ಲರೂ ಬೆಂಬಲ ನೀಡಬೇಕಿದೆ ಎಂದರು.
ಸರ್ಕಾರಗಳು ಮಂಗಳಮುಖಿಯರಿಗಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಅವರಿಗೂ ಸ್ತ್ರೀಶಕ್ತಿ ಸಂಘಗಳಂತೆ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಆರ್ಥಿಕ ಸದೃಢತೆ ತರಲು ಸರ್ಕಾರಗಳು ಮುಂದೆ ಬರಬೇಕಿದೆ. ತೃತೀಯ ಲಿಂಗಿಗಳೂ ಕೂಡ ಸಾಕಷ್ಟು ಕ್ಷೇತ್ರಗಳಲ್ಲಿ ಸಾಧನೆಯ ಶಿಖರವೇರಿದ್ದನ್ನು ಕಾಣಬಹುದಾಗಿದೆ ಎಂದರು. ಈ ವೇಳೆ ಫೌಂಡೇಶನ್ ಕಾರ್ಯದರ್ಶಿ ಸುನಿಲ್, ಗೌರವಾಧ್ಯಕ್ಷ ಕಲ್ಕುಣಿಕೆ ಭಾಸ್ಕರ್ ಇತರರು ಇದ್ದರು.