ಕೈಗೆಟಕುವ ದರದಲ್ಲಿ ಊಟ-ತಿಂಡಿ

Economy meals
Published on

ಹುಬ್ಬಳ್ಳಿ: ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಊಟ, ತಿಂಡಿ ತಿನಿಸುಗಳ ಜತೆಗೆ ಕುಡಿಯುವ ನೀರಿನ ಪ್ಯಾಕೇಜು ಒಳಗೊಂಡಿರುವ ಸೇವೆ ಒದಗಿಸುವ ಯೋಜನೆಗೆ ನೈಋತ್ಯ ರೈಲ್ವೆ ವಲಯದಲ್ಲಿ ಗುರುವಾರ ಚಾಲನೆ ನೀಡಲಾಗಿದೆ.

ವಲಯ ವ್ಯಾಪ್ತಿಯ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ನಿಲ್ದಾಣ ಹಾಗೂ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಆರಂಭಿಸಲಾಯಿತು.

ಸಾಮಾನ್ಯ ಬೋಗಿಗಳು ನಿಲ್ಲುವ ಪ್ಲಾಟ್‌ಫಾರ್ಮ್ ಬಳಿ ಐಆರ್‌ಸಿಟಿಸಿಯ ಅಡುಗೆ ಘಟಕಗಳಿಂದ ತಯಾರಿಸಿದ ಊಟ-ತಿಂಡಿಯ ಪೊಟ್ಟಣ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆಯನ್ನು 6 ತಿಂಗಳುಗಳ ಅವಧಿಯ ಪ್ರಾಯೋಗಿಕ ಆಧಾರದ ಮೇಲೆ ಒದಗಿಸಲಾಗುತ್ತಿದೆ.

ಎರಡು ವಿಧದ ಪ್ಯಾಕೇಜ್‌ಗಳಿವೆ. 1ನೇ ಪ್ಯಾಕೇಜ್‌ನಲ್ಲಿ 7 ಪೂರಿ (175 ಗ್ರಾಂ), ಒಣ ಆಲೂ ವೆಜ್ (150 ಗ್ರಾಂ) ಮತ್ತು ಉಪ್ಪಿನಕಾಯಿ (12 ಗ್ರಾಂ) ಒಳಗೊಂಡಿರುತ್ತದೆ. ಇದಕ್ಕೆ 20 ರೂ. (ಜಿಎಸ್‌ಟಿ ಸೇರಿ) ದರ ನಿಗದಿ ಮಾಡಲಾಗಿದೆ. 2ನೇ ಪ್ಯಾಕೇಜ್‌ನಲ್ಲಿ ಊಟ (350 ಗ್ರಾಂ) - ಅನ್ನ, ರಾಜ್ಮಾ/ಚೋಲೆ ಅನ್ನ/ಖಿಚಡಿ/ಕುಲ್ಚಾ/ ಭತುರಾ/ಪಾವ್-ಬಾಜಿ/ಮಸಾಲಾ ದೋಸೆ ಸೇರಿ ಕೆಲ ದಕ್ಷಿಣ ಭಾರತದ ಆಹಾರದ ಪೊಟ್ಟಣ ಒಳಗೊಂಡಿರುತ್ತದೆ. ಇದಕ್ಕೆ 50 ರೂ. (ಜಿಎಸ್‌ಟಿ ಸೇರಿ) ದರ ನಿಗದಿ ಮಾಡಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 200 ಎಂಎಲ್ ಗ್ಲಾಸ್ ಮತ್ತು 1 ಲೀಟರ್ ಕುಡಿಯುವ ನೀರಿನ ಬಾಟಲಿಗಳು ಲಭ್ಯವಿರುತ್ತವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ದೇಶದಾದ್ಯಂತ 64 ನಿಲ್ದಾಣಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ನೈಋತ್ಯ ರೈಲ್ವೆ ವಲಯದ ಹೆಚ್ಚಿನ ನಿಲ್ದಾಣಗಳನ್ನು ಗುರುತಿಸಿ ವಿಸ್ತರಿಸಲಾಗುವುದು ಎಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net