

ಸಾಧನೆಗೆ ಪ್ರತೀಕ ಗಂಜಾಂನ ಮಣ್ಣಿನ ಮಗ ಚಂದ್ರಶೇಖರ
ಎಚ್.ಎಸ್.ಭರತ್‌ಕುಮಾರ್ ಶ್ರೀರಂಗಪಟ್ಟಣ
ಕೃಷಿ ಎಂದಾಕ್ಷಣ ಕೆಲವರು ಮೂಗು ಮುರಿಯುತ್ತಾರೆ. ಇದು ಕಡು ಕಷ್ಟದ ಕಾಯಕ ಎಂದು ಹೀಗಳೆಯುತ್ತಾರೆ. ಆದರೆ ಮಾಡುವ ಕಾಯಕದಲ್ಲಿ ಪ್ರೀತಿ, ಶ್ರದ್ಧೆ ಹಾಗೂ ವಿಶ್ವಾಸದೊಂದಿಗೆ ಕೌಶಲ ರೂಢಿಸಿಕೊಂಡರೆ ಸಮೃದ್ಧ ಬೆಳೆ ಪಡೆಯಬಹುದು. ಇದಕ್ಕೆ ಶ್ರೀರಂಗಪಟ್ಟಣ ಸಮೀಪದ ಗಂಜಾಂನ ರೈತ ಚಂದ್ರಶೇಖರ ಸಾಕ್ಷಿಯಾಗಿದ್ದಾರೆ.
ಪುರಸಭಾ ವ್ಯಾಪ್ತಿಯ ಗಂಜಾಂನ ಚಂದ್ರಶೇಖರ ತಮ್ಮ 6.5 ಎಕರೆ ಕೃಷಿ ಭೂಮಿಯಲ್ಲಿ ಸಮಗ್ರ ತೋಟಗಾರಿಕೆ ಬೆಳೆಯಿಂದ ತಿಂಗಳಿಗೆ ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಶ್ರಮಿಕ ಜೀವನದಿಂದ ಮೇಲೆ ಬಂದ ಅವರು ಈಗ ಹಿರಿಯ ಕೈಗಾರಿಕೋದ್ಯಮಿಗಳಂತೆ ಬದುಕು ನಡೆಸುತ್ತಿದ್ದಾರೆ. ಪ್ರಾಮಾಣಿಕವಾಗಿ ಕೃಷಿ ಮಾಡಿದರೆ ಕಷ್ಟ ಎಂಬುದು ಹತ್ತಿರ ಸುಳಿಯಲಾರದು. ಹವಾಮಾನ, ಬೆಲೆ ಏರಿಳಿತ, ಮಾರುಕಟ್ಟೆಗಳು ತೊಂದರೆ ನೀಡಲಾರವು ಎಂಬುದಕ್ಕೆ ರೈತ ಚಂದ್ರಶೇಖರ ಉದಾಹರಣೆಯಾಗಿದ್ದಾರೆ.
ಮಂಡ್ಯ ಜಿಲ್ಲೆ ಎಂದಾಕ್ಷಣ ನೀರಾವರಿ ಅನೂಕೂಲತೆ ಹಾಗೂ ಫಲವತ್ತಾದ ಜಮೀನುಗಳೇ ಕಣ್ಣೆದುರಿಗೆ ಬರುತ್ತವೆ. ಎಲ್ಲೆಲ್ಲೂ ಕಬ್ಬು, ಭತ್ತ ಹಾಗೂ ತೆಂಗು ಬೆಳೆ. ಇನ್ನುಳಿದಂತೆ ಇತರ ಸಣ್ಣ ಪುಟ್ಟ ಭೂಮಿಗಳಲ್ಲಿ ರಾಗಿ, ಸೊಪ್ಪು ಹಾಗೂ ತರಕಾರಿ ಬೆಳೆಗಳು, ಅಲ್ಲಲ್ಲಿ ರೇಷ್ಮೆ ಬೆಳೆ ಕಂಡುಬರುತ್ತವೆ. ಆದರೆ ಚಂದ್ರಶೇಖರ ಎಲ್ಲರಂತೆ ಭತ್ತ, ಕಬ್ಬು, ರಾಗಿ ಬೆಳೆ ಬೆಳೆಯುವ ಕೆಲಸ ಮಾಡಲಿಲ್ಲ. ಭಿನ್ನವಾಗಿ ಮಾಡಬೇಕೆಂದು ತೋಟಗಾರಿಕೆ ಬೆಳೆಗೆ ಮುಂದಾದರು. ಸಮಗ್ರ ಕೃಷಿಯತ್ತ ಹೆಜ್ಜೆಯನ್ನಿಟ್ಟರು. ಇದರ ಫಲವಾಗಿ ವಾರ್ಷಿಕ 12 ರಿಂದ 15 ಲಕ್ಷ ರೂ. ವರೆಗೆ ಲಾಭ ಗಳಿಸುತ್ತಿದ್ದಾರೆ. ಇದಕ್ಕೆಲ್ಲಾ ಶ್ರಮ ಮತ್ತು ಶ್ರದ್ಧೆಯೇ ಕಾರಣ ಎಂದು ಅವರು ದೃಢವಾಗಿ ನಂಬಿದ್ದಾರೆ.
*
ಬಾಳೆ-ತಾಳೆಯಿಂದ ಬಂಗಾರವಾಯಿತು ಬದುಕು
ಚಂದ್ರಶೇಖರ ಅವರು ಮೂಲತಃ ಅಗರಬತ್ತಿ ತಯಾರಿಕೆ ಮತ್ತು ವ್ಯಾಪಾರ ಉದ್ಯಮದಿಂದ ಬದುಕು ಆರಂಭಿಸಿದವರು. ಗಳಿಸಿದ ಸಲ್ಪ ಆದಾಯದಲ್ಲಿ ಜಮೀನು ಖರಿದಿಸಿದರು. ಸಣ್ಣ ಕೃಷಿ ಭೂಮಿಯನ್ನು ನಂತರ 6.5 ಎಕರೆವರೆಗೆ ವಿಸ್ತರಿಸಿಕೊಂಡರು. ಬಳಿಕ ಅಗರಬತ್ತಿ ಉದ್ಯಮಕ್ಕೆ ಗುಡ್ ಬೈ ಹೇಳಿ ಸಂಪೂರ್ಣ ರೈತಾಪಿ ಜೀವನ ಆರಂಭಿಸಿದರು. ಮೊದಲು ಬಾಳೆ ಸಸಿ ಹಾಕುವುದರಿಂದ ಇವರ ಕೃಷಿ ಬದುಕು ಆರಂಭವಾಯಿತು. ಒಂದಷ್ಟು ಆದಾಯವೂ ಅಲ್ಲಿ ದೊರಕಿತು.
ಅಧಿಕಾರಿಗಳಿಂದ ದೊರೆತ ಮಾಹಿತಿ: ಕೃಷಿಯ ಮೇಲಿನ ಆಸಕ್ತಿ ದಿನ ಕಳೆದಂತೆ ಹೆಚ್ಚಾಯಿತು. ಕೃಷಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಚಂದ್ರಶೇಖರ ತಾಳೆ ಕೃಷಿ ಬಗ್ಗೆ ಒಲವು ತೋರಿದರು. 2005ರಲ್ಲಿ ಕೃಷಿ ಇಲಾಖೆ ಉಚಿತವಾಗಿ ನೀಡಿದ 350 ಸಸಿ ಮತ್ತು ಗೊಬ್ಬರ ಪಡೆದು 3.5 ಎಕರೆ ಜಮೀನಲ್ಲಿ ತಾಳೆ ಗಿಡ ನೆಟ್ಟು ಪೋಷಣೆ ಮಾಡಿದರು. 2 ವರ್ಷಗಳ ಬಳಿಕ ಸಮೃದ್ಧ ಇಳುವರಿ ಬಂತು. ಪ್ರಾರಂಭದಲ್ಲಿ ಸಸಿಯೊಂದರಲ್ಲಿ 10ಕೆಜಿಯಿಂದ ಆರಂಭವಾದ ಗೊನೆ 70 ಕೆಜಿಯಷ್ಟು ತಲುಪಿದ್ದು ಸಾಧನೆಯೇ ಆಯಿತು. ಈಗ ಪ್ರತಿ 15 ದಿನಗಳಿಗೊಮ್ಮೆ ಎಲ್ಲ್ಲ ಮರಗಳಿಂದ 100 ಟನ್‌ಗಳಷ್ಟು ತಾಳೆ ಹಣ್ಣುಗಳನ್ನು ಪಡೆಯುತ್ತಿದ್ದಾರೆ. ಅಡುಗೆ ಎಣ್ಣೆ ತಯಾರಿಸುವ ಆಂಧ್ರ ಪ್ರದೇಶದ ಕಂಪನಿಗಳಿಗೆ ಈ ಫಸಲನ್ನು ಸಾಗಣೆ ಮಾಡುತ್ತಾರೆ. ಇದರಿಂದ ತಿಂಗಳಿಗೆ ಲಕ್ಷ ರೂ. ಆದಾಯ ಕಾಣುತ್ತಿದ್ದಾರೆ.
*
ಸೀಬೆಯಲ್ಲಿ ಕ್ರಾಂತಿ, ಸೇಬು ಬೆಳೆಯುವಲ್ಲಿ ಆಸಕ್ತಿ
ರೈತ ಚಂದ್ರಶೇಖರ ತಮ್ಮ 3 ಎಕರೆ ಫಲವತ್ತಾದ ಭೂಮಿಯಲ್ಲಿ ಥೈವಾನ್ ಲೈಟ್ ಪಿಂಕ್ ಸೇಬು ಕೃಷಿ ಮಾಡಿದ್ದಾರೆ. ಈ ತಳಿಯ 770 ಸಸಿಗಳನ್ನು ನೆಟ್ಟು ಪೋಷಕಾಂಶದೊಂದಿಗೆ ನೀರುಣಿಸಿದ ಪರಿಣಾಮ 470 ಸಸಿಗಳು ಉತ್ತಮ ಫಸಲು ನೀಡುತ್ತಿವೆ. ವಾರದಲ್ಲಿ 2 ಬಾರಿ ಸೀಬೆ ಫಲ ಕೊಯ್ಲು ಮಾಡುವ ಮೂಲಕ 200 ಕೆಜಿಗಳಷ್ಟು ಹಣ್ಣುಗಳನ್ನು ಪಡೆಯುತ್ತಿದ್ದಾರೆ.
ಒಂದೇ ಬೆಳೆಗೆ ತೃಪ್ತರಾಗದ ಚಂದ್ರಶೇಖರ, ಹೊಸ ಹೊಸ ಹೆಜ್ಜೆಯನ್ನಿಡುವ ಹವ್ಯಾಸದವರು. ಜಮೀನಲ್ಲಿ ಒಂದು ಸಾಲಿನಲ್ಲಿ ಸೀಬೆ ಬೆಳೆ ಪಡೆಯುತ್ತಿರುವ ಇವರು ಮತ್ತೊಂದು ಸಾಲಿನಲ್ಲಿ ಸೇಬು ಬೆಳೆ ಕೃಷಿಗೆ ಸಂಕಲ್ಪ ಮಾಡಿದರು. ಮಂಡ್ಯ ಜಿಲ್ಲೆ ವಾತಾವರಣದಲ್ಲೂ ಸೇಬು ಫಲ ಬಿಡುವಂತೆ ಸಸಿಗಳನ್ನು ಬಹು ಶ್ರಮವಹಿಸಿ ಪೋಷಣೆ ಮಾಡಿದರು., ಯಶ ಕಂಡರು. ಚಿತ್ರದುರ್ಗದಿಂದ ಅನ್ನಾ, ಹರ್ಬಲ್ 99 ಹಾಗೂ ಡಾರ್ಸನ್ ಗೋಲ್ಡ್ ಎಂಬ ತಳಿಗಳ ಹೆಸರಿನ ಒಟ್ಟು 300 ಸೇಬು ಸಸಿಗಳನ್ನು ತಂದು ನೆಟ್ಟಿರುವ ಇವರು ಬಯಲುಸೀಮೆಯಲ್ಲೂ ಸಮೃದ್ಧ ಸೇಬು ಫಲ ಪಡೆಯುವ ಹೆಸರಾಂತ ಕೃಷಿಕರಾಗಿದ್ದಾರೆ. ಅನ್ನಾ ತಳಿಯ 200, ಹರ್ಬಲ್ 99 ತಳಿಯ 70 ಹಾಗೂ ಡಾರ್ಸನ್ ಗೋಲ್ಡ್ 30 ತಳಿಯ ಸೇಬಿನ ಮರಗಳು ಇಳುವರಿ ನೀಡಲಾರಂಭಿಸಿವೆ.
*
ಸೀಬೆ ಮತ್ತು ಸೇಬು ಕೃಷಿಯೊಂದಿಗೆ ರೈತ ಚಂದ್ರಶೇಖರ ಅವರು ಇತರ ಹಣ್ಣುಗಳನ್ನು ಬೆಳೆಯುವಲ್ಲೂ ಸಾಧನೆ ತೋರಿದ್ದಾರೆ. 5 ಹಲಸಿನ ಮರ, 4 ಬಾದಾಮಿ ಮಾವಿನ ಮರಗಳು ಹಾಗೂ ಕ್ರಿಕೆಟ್ ಬಾಲ್ ತಳಿಯ 50 ಸಪೋಟಾ ಬೆಳೆಸಿದ್ದಾರೆ. ಇದರೊಂದಿಗೆ 10 ಬಟರ್ ಫ್ರೂಟ್, 5 ಸ್ಟಾರ್ ಫ್ರೂಟ್, ತಲಾ 5 ಪನ್ನೇರಳೆ, ಚಕ್ಕೋತಾ, ವಾಟರ್ ಆ್ಯಪಲ್‌ರೆಡ್, ಕಿತ್ತಳೆ, ಮೋಸಂಬಿ, 4 ಬಿಳಿನೇರಳೆ, 2 ಕಪ್ಪು(ಜಮ್)ನೇರಳೆ ಹಾಗೂ 65-ಸೀಡ್‌ಲೆಸ್ ನಿಂಬೆ ಸಸಿಗಳನ್ನು ಈಗ ಬೆಳೆಸುತ್ತಿದ್ದಾರೆ.
ಇದರೊಂದಿಗೆ ಜಮೀನುಗಳಲ್ಲಿ 230 ತೆಂಗಿನ ಮರ ಇವೆ. ಎಳನೀರು, ತೆಂಗಿನ ಕಾಯಿ ಹಾಗೂ ಕೊಬ್ಬರಿಯಿಂದಲೂ ಆದಾಯ ಗಳಿಸುತ್ತಿದ್ದಾರೆ. ತೋಟದಲ್ಲಿ 850 ಅಡಕೆ ಸಸಿ ಇವೆ. ಇವುಗಳಲ್ಲಿ 150 ಮರ ಫಸಲು ನೀಡುತ್ತಿವೆ. ವಾಣಿಜ್ಯ ಬೆಳೆಯಾಗಿ ಜಮೀನು ಸುತ್ತಲೂ 150 ತೇಗದ ಮರ ಬೆಳೆಸಿದ್ದಾರೆ. ಒಟ್ಟಾರೆ ಚಂದ್ರಶೇಖರ ಮಣ್ಣಿನ ಮಗನಾಗಿ ಸಾಧನೆ ಹಾದಿಯಲ್ಲಿ ಮೈಲಿಗಲ್ಲನ್ನೇ ಸ್ಥಾಪಿಸಿದ್ದಾರೆ.
*
ಸ್ಥಳೀಯ ಮಾರುಕಟ್ಟೆಗೆ ಆದ್ಯತೆ
ಸೀಬೆ, ಸಪೋೀಟ, ಚಕ್ಕೋತ, ಹಲಸು ಇತ್ಯಾದಿಗಳಿಗೆ ಸ್ಥಳೀಯ, ಅಕ್ಕಪಕ್ಕದ ಜಿಲ್ಲೆಯ ಗ್ರಾಹಕರಿಗೆ ಆದ್ಯತೆ ನೀಡುತ್ತಾರೆ ಚಂದ್ರಶೇಖರ. ವಾರಕ್ಕೆ 2 ಬಾರಿ 200 ಕೆಜಿ ಸೀಬೆ ಹಣ್ಣುಗಳನ್ನು ಸ್ಥಳೀಯ ಮಾರುಕಟ್ಟೆಗೇ ನೀಡುತ್ತಾರೆ.