

ಮದ್ದೂರು : ತಾಲೂಕಿನ ಕೊಪ್ಪದಲ್ಲಿ ಹಿಂದು ಮತ್ತು ಮುಸ್ಲಿಮರು ಒಟ್ಟಾಗಿ ಸೇರಿ ಗಣೇಶ ಮೂರ್ತಿ ವಿಸರ್ಜನೆ ಮಾಡುವ ಮೂಲಕ ಸೌಹಾರ್ದತೆ ಮೆರೆದಿದ್ದು ವಿಶೇಷವಾಗಿತ್ತು.
ಗ್ರಾಮದ 5ನೇ ವಾರ್ಡಿನ ಇಂದಿರಾ ನಗರದಲ್ಲಿ ಎರಡೂ ಸಮುದಾಯದವರು 10 ದಿನಗಳ ಹಿಂದೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಪ್ರತಿನಿತ್ಯ ಪೂಜೆ ಮಾಡಿ ಜನರಿಗೆ ತೀರ್ಥ, ಪ್ರಸಾದ ವಿತರಣೆ ಮಾಡಲಾಗಿತ್ತು.
ಶುಕ್ರವಾರ ಮಧ್ಯಾಹ್ನ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ ನಂತರ ಹಿಂದುಗಳೊಂದಿಗೆ ಸೇರಿದ ಮುಸ್ಲಿಮರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಗಣೇಶನ ಮೆರವಣಿಗೆ ನಡೆಸಿ,ಕೊಪ್ಪದ ಕೆರೆಯಲ್ಲಿ ವಿಸರ್ಜನೆ ಮಾಡಿದ್ದು ಗಮನ ಸೆಳೆಯಿತು. ಗ್ರಾಪಂ ಸದಸ್ಯ ಕೆ.ಎಂ.ಪರ್ವಿಜ್ ಪಾಷ ಮಾತನಾಡಿ, ಗ್ರಾಮದಲ್ಲಿ ಹಲವು ವರ್ಷದಿಂದ ಸೌಹಾರ್ದ ಗಣೇಶ ಉತ್ಸವ ನಡೆಯುತ್ತಿದೆ. ಹಬ್ಬ- ಉತ್ಸವದಲ್ಲಿ ಎರಡೂ ಸಮುದಾಯದ ಒಗ್ಗಟ್ಟು ಮಾದರಿಯಾಗಿದೆ ಎಂದರು. ಮುಖಂಡರಾದ ಆದಂ, ಸುನೀಲ್, ಹೇಮಂತ, ಸುಮಂತ ಇತರರು ಇದ್ದರು.ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.