

ಕೆ.ಎಂ. ದೊಡ್ಡಿ: ಸಕಾಲದಲ್ಲಿ ತೆರಿಗೆ ಕಟ್ಟುವುದರ ಮೂಲಕ ಗ್ರಾಮಾಭಿವೃದ್ದಿಗೆ ಸಹಕರಿಸಬೇಕು ಎಂದು ಮದ್ದೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಮನವಿ ಮಾಡಿದರು. ಸಮೀಪದ ದೊಡ್ಡರಸಿನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೌಡಯ್ಯನದೊಡ್ಡಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಸೃಜನೆಯಾಗುತ್ತಿರುವ ಕಾಲುವೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಕರ ವಸೂಲಾತಿ ಮಾಸಾಚರಣೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೂಲಿ ಕಾರ್ಮಿಕರ ಸಮ್ಮುಖದಲ್ಲಿ ಕರವಸೂಲಾತಿ ಮಾಸಾಚರಣೆಯನ್ನು ಮಾಡಿ, ಪ್ರತಿಯೊಬ್ಬರೂ 1,000 ರೂ. ತೆರಿಗೆ ಕಟ್ಟುವ ಮೂಲಕ ಗ್ರಾಮಾಭಿವೃದ್ಧಿಗೆ ಸಹಕರಿಸಬೇಕು ಎಂದರು. ತಾಲ್ಲೂಕಿನಲ್ಲಿ ಬೃಹತ್ ಮಟ್ಟದಲ್ಲಿ ‘ದುಡಿಯೋಣ ಬಾ ಅಭಿಯಾನ ’ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. ಈ ಅಭಿಯಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದರು.
ಕಾರ್ಮಿಕರ ಹಾಜರಾತಿಯನ್ನು ಪರಿಶೀಲಿಸಿ, ನರೇಗಾ ಯೋಜನೆಯಡಿ ಪ್ರತಿಯೊಬ್ಬರು ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಬೇಕು. ವೈಯಕ್ತಿಕವಾಗಿ ಒಂದು ಉದ್ಯೋಗ ಚೀಟಿಯಿಂದ 5 ಲಕ್ಷದ ವರೆಗೂ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಪಡೆದುಕೊಳ್ಳಬಹುದು. ಈ ಅವಧಿಯಲ್ಲಿ ಕಾಮಗಾರಿ ಸ್ಥಳದಲ್ಲಿ ನೀಡಲಾಗಿರುವ ಸವಲತ್ತುಗಳೊಂದಿಗೆ ಇತರೆ ಏನಾದರೂ ಸಮಸ್ಯೆ ಇದ್ದರೆ ತಿಳಿಸಬೇಕೆಂದರು. ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಮುಂತಾದ ಸಲವತ್ತುಗಳನ್ನು ಪರಿಶೀಲಿಸಿದರು. ಸಹಾಯಕ ನಿರ್ದೇಶಕರಾದ ಮಂಜುನಾಥ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗೇಶ, ತಾಂತ್ರಿಕ ಸಹಾಯಕರು, ಕೂಲಿ ಕಾರ್ಮಿಕರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.