

ಹಲಗೂರು : ವಿಭಿನ್ನ ತಂತ್ರಗಾರಿಕೆ ಮೂಲಕ ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕ ವಿಶ್ವನಾಥ ಅವರ ಸೇವಾಗುಣ ಶ್ಲಾಘನೀಯ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್. ಮಲ್ಲಿಕಾರ್ಜುನಯ್ಯ ತಿಳಿಸಿದರು.
ಹಲಗೂರು ಸಮೀಪದ ಧನಗೂರು ಕುರಿಫಾರಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ, ಸೋಮವಾರ ವಯೋ ನಿವೃತ್ತಿ ಹೊಂದಿದ ಶಿಕ್ಷಕ ಎಸ್. ವಿಶ್ವನಾಥ ಅವರ ಬೀಳ್ಕೊಡುಗೆಗಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ ಸಮನ್ವಯ ಅಧಿಕಾರಿ ಶ್ರೀನಿವಾಸ ಮಾತನಾಡಿ, ಭಾಷೆಯಲ್ಲಿ ಅದ್ಭುತ ನೈಪುಣ್ಯತೆ ಹೊಂದಿದ್ದರೂ, ಅದನ್ನು ಮಕ್ಕಳ ಮನಕ್ಕೆ ನಾಟುವಂತೆ ಬೋಧನೆ ಮಾಡುವುದು ಶಿಕ್ಷಕರಿಗೆ ಸವಾಲಿನ ಕೆಲಸ. ಆದರೆ ಆಂಗ್ಲ ಭಾಷೆಯನ್ನು ಗ್ರಾಮೀಣ ಮಕ್ಕಳಿಗೆ ಸರಳವಾಗಿ ಕಲಿಸುವ ವಿಶ್ವನಾಥರ ಜಾಣ್ಮೆ ಒಂದು ವಿಶೇಷ ಮಾದರಿಯಾಗಿದೆ
ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಡ್ಲಿ ವೃತ್ತದ ಶಿಕ್ಷಣ ಸಂಯೋಜಕ ಯೋಗಾನಂದ ಮಾತನಾಡಿ, ಸದಾ ಉತ್ಸಾಹದ ಚಿಲುಮೆಯಾಗಿ, ಶಿಸ್ತು ಬದ್ಧ ವ್ಯಕ್ತಿತ್ವ ಹೊಂದಿರುವ ವಿಶ್ವನಾಥರ ಬೋಧನಾ ಚತುರತೆಯನ್ನು ಹೊಸ ಪೀಳಿಗೆಯ ಶಿಕ್ಷಕರು ಅನುಸರಿಸಬೇಕು ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಸುಕನ್ಯಾ ಮಾತನಾಡಿ, ತರಬೇತಿ ಶಿಬಿರಗಳಲ್ಲಿ ಕ್ರಿಯಾತ್ಮಕ ಚಟುವಣಿಕೆಗೆ ಅನ್ವರ್ಥವಾಗಿದ್ದವರು ವಿಶ್ವನಾಥ. ಅವರು ಇಂದು ನಿವೃತ್ತಿ ಹೊಂದುತ್ತಿರುವುದು ವಯಕ್ತಿಕವಾಗಿ ಬೇಸರ ತಂದಿದೆ ಎಂದರು. ಅವರು ಪ್ರವೃತ್ತಿಯಿಂದ ಎಂದೂ ನಿವೃತ್ತರಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಅವರು ತಮ್ಮ ಅನುಭವಗಳನ್ನು ಶಿಕ್ಷಕರೊಂದಿಗೆ ಹಂಚಿಕೊಳ್ಳಬೇಕು. ಬೋಧನಾ ತಂತ್ರಗಳನ್ನು ಹೊಸ ಶಿಕ್ಷಕರಿಗೆ ಧಾರೆ ಎರೆಯಬೇಕು ಎಂದರು. ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಶಿವಶಂಕರ್, ಶಿಕ್ಷಣ ಸಂಯೋಜಕ ಟಿ.ಎಂ. ರವಿಕುಮಾರ್, ಶಿಕ್ಷಕರಾದ ಲೋಕೇಶ, ಸಿದ್ದರಾಜು, ಮಹೇಶ್, ಪಾಪಣ್ಣ, ಕುಮಾರ್, ರವಿ, ದಾಸೇಗೌಡ, ವಿ.ಎಲ್.ಬಸವರಾಜು, ಎಸ್.ಡಿ.ಎಂ.ಸಿ. ಅಧ್ಯಕ್ಷ ಗೋವಿಂದ, ಶಿಕ್ಷಕ ಸೋಮಶೇಖರ, ಗ್ರಾಮಸ್ಥರಾದ ಆರ್. ಗೋವಿಂದರಾಜು, ಶಿವಣ್ಣ ಇತರರು ಇದ್ದರು. ’