

ಮದ್ದೂರು : ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಯೊಂದಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು. ತಾಲೂಕಿನ ನವಿಲೆ ಹಾಗೂ ಚಿಕ್ಕಅಂಕನಹಳ್ಳಿ ಗ್ರಾಮಗಳಲ್ಲಿ ಸೋಮವಾರ ಶಾಲಾ ಕೊಠಡಿಗಳ ನಿರ್ಮಾಣ, ಸಮುದಾಯ ಭವನದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಸರ್ಕಾರಿ ಶಾಲೆಯ ಮಕ್ಕಳಿಗೆ ಸರ್ಕಾರ ಎಲ್ಲಾ ರೀತಿಯ ಸವಲತ್ತು ನೀಡುತ್ತಿದ್ದು, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವು ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ತೋರಿಸಿದ್ದಾರೆ. ಆದ್ದರಿಂದ ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹಬಿಟ್ಟು ಸರ್ಕಾರಿ ಶಾಲೆಗೆ ದಾಖಲಿಸುವಂತೆ ಮನವಿ ಮಾಡಿದರು.
ದೇವಸ್ಥಾನದ ಅಭಿವೃದ್ಧಿಗೆ ಒತ್ತಾಯ : ಚಿಕ್ಕ ಅಂಕನಹಳ್ಳಿಯ ಪುರಾಣ ಪ್ರಸಿದ್ಧ ಶ್ರೀನಂದಿ ಬಸವೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಸಾಕಷ್ಟು ಶಿಥಿಲಗೊಂಡಿದೆ. ದೇಗುಲ ಜೀರ್ಣೋದ್ಧಾರ ಗೊಳಿಸಬೇಕು ಹಾಗೂ ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಿಸಬೇಕು ಎಂದು ಇದೇ ಸಂದರ್ಭ ಅರ್ಚಕ ಗೌರಿಶಂಕರ ಮನವಿ ಮಾಡಿದರು. ಭಕ್ತರಿಗೆ ಶೌಚಗೃಹದ ವ್ಯವಸ್ಥೆ, ಯುಪಿಎಸ್ ಅಳವಡಿಕೆ ಮಾಡಿಸಿಕೊಡಬೇಕು ಎಂದು ಅವರು ಬೇಡಿಕೆ ಇಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಉದಯ್, ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಿಇಒ ಗಂಗಾಧರ, ಮುಖ್ಯ ಶಿಕ್ಷಕರಾದ ಫಕ್ರುದ್ದೀನ್, ನವೀನ್, ಪ್ರಸನ್ನ, ಶಿಕ್ಷಕರಾದ ಮಂಜು, ಮಹಾದೇವಮ್ಮ, ಗ್ರಾಪಂ ಸದಸ್ಯರಾದ ಪ್ರಸಾದ್, ಚಮಲಾಪುರದದೊಡ್ಡಿ ನವೀನ್, ಮುಖಂಡರಾದ ಶಂಕರ ಲಿಂಗೇಗೌಡ ಇದ್ದರು.