

ಮದ್ದೂರು : ನಾಡಪ್ರಭು ಕೆಂಪೇಗೌಡರ ದೂರದೃಷ್ಠಿಯ ಫಲವಾಗಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಡೆ ಪಡೆದುಕೊಂಡಿದೆ ಎಂದು ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಪ್ರೊ.ಕೃಷ್ಣ ಬಣ್ಣಿಸಿದರು.ಪಟ್ಟಣದ ಟೌನ್ ಕ್ಲಬ್‌ನ ಬಿ.ಜಿ.ಎಸ್. ಗ್ರಂಥಾಲಯದಲ್ಲಿ ಭಾನುವಾರ ಚುಂಚಶ್ರೀ ಗೆಳೆಯರ ಬಳಗ, ಟೌನ್ ಕ್ಲಬ್ ಮತ್ತು ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡುವಾಗ ನೂರಾರು ಕೆರೆ, ಕಟ್ಟೆಗಳನ್ನು ಕಟ್ಟಿಸಿದರು. ವಿವಿಧ ವರ್ಗದ ಜನರಿಗೂ ಬದುಕು ಕಟ್ಟಿಕೊಳ್ಳಲು ಹಲವು ಪೇಟೆಗಳನ್ನು ನಿರ್ಮಾಣ ಮಾಡಿಕೊಟ್ಟರು. ಉತ್ತಮ ಪರಿಸರದಲ್ಲಿ ಪ್ರಜೆಗಳು ಬಾಳಬೇಕು ಎಂಬುದು ಅವರ ಉದ್ದೇಶವಾಗಿತ್ತು ಎಂದರು.
ಅವರ ನಿಷ್ಕಳಂಕ ಜೀವನ, ಅಚಲ ಸ್ವಾಮಿ ನಿಷ್ಠೆ, ಅನುಪಮ ದೈವ ಭಕ್ತಿಗಳು ನಾಡಿಗೆ ಮಾದರಿಗಳಾಗಿವೆ. ಅವರ
ಆಡಳಿತ ಕುಶಲತೆ ಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ವಿಚಾರ ಧಾರೆಗಳನ್ನು ಯುವ ಸಮುದಾಯಕ್ಕೆ ತಿಳಿಸುವ ಕೆಲಸ ಮಾಡಬೇಕು ಎಂದರು. ಹಿರಿಯ ವಕೀಲ ಅಪ್ಪಾಜಿಗೌಡರನ್ನು ಗೌರವಿಸ ಲಾಯಿತು. ಸಾಹಿತಿ ಬಿ.ವಿ.ಹಳ್ಳಿ ನಾರಾಯಣ್ ವಿಶೇಷ ಉಪನ್ಯಾಸ ನೀಡಿದರು.
ಕೆಂಪೇಗೌಡ ಒಕ್ಕಲಿಗರ ಸಂಘದ ಕಾರ್ಯದರ್ಶಿ ಸಿ.ಸುರೇಶ್, ಚುಂಚಶ್ರೀ ಗೆಳೆಯರ ಬಳಗ ಪ್ರಧಾನ ಕಾರ್ಯದರ್ಶಿ ವಿ.ಟಿ.ರವಿಕುಮಾರ್, ಎಂ.ಎ.ಕೃಷ್ಣ, ಸಂಚಾಲಕ ಕೆ.ಶಿವಕುಮಾರ್, ಟೌನ್ ಕ್ಲಬ್ ಕಾರ್ಯದರ್ಶಿ ದೊರೆಸ್ವಾಮಿ, ಗೌರವಾಧ್ಯಕ್ಷ ಚನ್ನಯ್ಯ, ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಚ್.ಆರ್.ಅನಂತೇಗೌಡ, ರಂಗಕರ್ಮಿ ಸಿ.ಕೃಷ್ಣೇಗೌಡ, ಸಂಘಟಕರಾದ ಚಂದ್ರು, ರಜನಿರಾಜ್, ಎಂ.ಆರ್.ಚಕ್ರಪಾಣಿ ಇದ್ದರು.