

26 ನೇ ವರ್ಷದ ಮಹಾಚಂಡಿಕಾಯಾಗ
ಮದ್ದೂರು : ಪಟ್ಟಣದ ಹೊಳೆ ಬೀದಿಯಲ್ಲಿರುವ, ಚಿಕ್ಕಸವದತ್ತಿ ಎಂದೇ ಪ್ರಸಿದ್ಧವಾಗಿರುವ ಶ್ರೀ ರೇಣುಕಾ ಎಲ್ಲಮ್ಮದೇವಿ ಜಾತ್ರಾ ಮಹೋತ್ಸವ ಬುಧವಾರ ಸಡಗರ, ಸಂಭ್ರಮದಿಂದ ನೆರವೇರಿತು. ಮಹೋತ್ಸವ ಅಂಗವಾಗಿ ಬೆಳಗ್ಗೆ 26 ನೇ ವರ್ಷದ ಮಹಾಚಂಡಿಕಾಯಾಗ ನೆರವೇರಿತು. ನಂತರ ದೇವಿಗೆ ಅಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಸುಮಂಗಲಿಯರಿಂದ ತಂಬಿಟ್ಟಿನ ಆರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನೆರವೇರಿದವು. ಮಧ್ಯಾಹ್ನ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.ಸಂಜೆ 5.30ಕ್ಕೆ ದೇವಿಗೆ ನಿಂಬೆಹಣ್ಣಿನ ದೀಪದ ಆರತಿ ಮತ್ತು ಉಯ್ಯಲೋತ್ಸವ ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ರಾತ್ರಿ7 ಕ್ಕೆ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ದೇವಿ ಸನ್ನಿಧಿ ವರೆಗೆ ಮುತ್ತಿನ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿಬಂತು. ತಿರುಪತಿ- ತಿರುಮಲ ದೇವಸ್ಥಾನದ ಮಂಜು ಬಾಲಾಜಿ ಅವರ ವಾದ್ಯಗೋಷ್ಠಿ, ಮಂಗಳೂರಿನ ಯಕ್ಷಗಾನ, ಕೇರಳದ ಚಂಡೆ ಮೇಳ, ತಮಿಳುನಾಡಿನ ಬ್ಯಾಂಡ್ ಸೆಟ್ ಸೇರಿದಂತೆ ಮದ್ದೂರಮ್ಮ ನವರ ಪೂಜಾ ಕುಣಿತ, ದಂಡಿನಮಾರಮ್ಮನವರ ಪೂಜಾ ಕುಣಿತ ಜನಮನ ಸೆಳೆಯಿತು.