

ಮಂಗಳೂರು: ಪಡುಶೆಡ್ಡೆ ಗ್ರಾಮದ ಬೊಂದೆಲ್ ಮೂಡುಶೆಡ್ಡೆ ರಸ್ತೆಯಲ್ಲಿರುವ ರೈಲ್ವೆ ಟ್ರಾೃಕ್‌ನ ರೈಲ್ವೆ ಅಂಡರ್ ಪಾಸ್ ಬಳಿಯಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, ಆತನಿಂದ 91,280 ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆದಿದ್ದಾರೆ.
ಮೂಡುಶೆಡ್ಡೆ ಶಿವನಗರ ಬದ್ರಿಯಾ ಮಂಜಿಲ್ ನಿವಾಸಿ ಮೊಹಮ್ಮದ್ ರಿಜ್ವಾನ್ (34) ಬಂಧಿತ ಆರೋಪಿ. ಈತ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಎಂಡಿಎಂಎ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಆರೋಪಿತನಿಂದ 75 ಸಾವಿರ ರೂ. ಮೌಲ್ಯದ 15 ಗ್ರಾಂ ನಿಷೇಧಿತ ಎಂಡಿಎಂಎ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್ ಹಾಗೂ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ಈತನ ಮೇಲೆ ಈ ಹಿಂದೆ ಮಂಗಳೂರು ನಗರದ ಕಾವೂರು, ಮಂಗಳೂರು ಗ್ರಾಮಾಂತರ, ಕೊಣಾಜೆ ಪೊಲೀಸ್ ಠಾಣೆ ಹಾಗೂ ಉಡುಪಿ ಜಿಲ್ಲೆಯ ಕೊಲ್ಲೂರು ಪೊಲೀಸ್ ಠಾಣೆಗಳಲ್ಲಿ ಕೊಲೆ, ದರೋಡೆ, ಹಲ್ಲೆ, ಮಾದಕ ವಸ್ತು ಸೇವನೆ ಪ್ರಕರಣಗಳು ದಾಖಲಾಗಿವೆ.