

ಮಂಗಳೂರು: ನಗರದಲ್ಲಿ ಮಾದಕ ವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದಾನನ್ನು ನಗರ ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಕೋಟೆಕಾರು ಗ್ರಾಮದ ವೈದ್ಯನಾಥ ನಗರದ ಬಗಂಬಿಲ ನಿವಾಸಿ ಅಕ್ಷತ್ ಕುಮಾರ್ (34) ಬಂಧಿತ ಆರೋಪಿ. ಈತನಿಂದ 72 ಗ್ರಾಂ ತೂಕದ 3,66,000 ರೂ. ಮೌಲ್ಯದ ಎಂಡಿಎಂಎ, 1 ಮೊಬೈಲ್, 20,880 ರೂ., ಡಿಜಿಟಲ್ ತೂಕ ಮಾಪನ ಸೇರಿದಂತೆ ಒಟ್ಟು 4,17,380 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿಷೇಧಿತ ಮಾದಕ ವಸ್ತುವನ್ನು ದೇರಳಕಟ್ಟೆಯ ಬಗಂಬಿಲದ ಮನೆಯೊಂದರ ಬಳಿಯಿರುವ ಶೆಡ್ ನಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ ಅವರ ನೇತೃತ್ವದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಹೆಚ್ಚಿನ ತನಿಖೆಗೆ ಪ್ರಕರಣವನ್ನು ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಎಸಿಪಿ ಪಿ.ಎ. ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್. ಎಂ., ಪಿಎಸ್‌ಐ ಶರಣಪ್ಪ ಭಂಡಾರಿ ಹಾಗೂ ಸಿಸಿಬಿ ಸಿಬ್ಬಂದಿ ಹಾಗೂ ಕೊಣಾಜೆ ಸಿಬ್ಬಂದಿ ಪಾಲ್ಗೊಂಡಿದ್ದರು.