ಮಾದಕ ವಸ್ತು ಮಾರಾಟ ಆರೋಪಿ ಬಂಧನ

mng--7 July Mohammad safwan
Published on

ಮಂಗಳೂರು : ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದವನನ್ನು ಪತ್ತೆಹಚ್ಚಿ ಆತನಿಂದ 36 ಗ್ರಾಂ ಎಂಡಿಎಂಎ ಡ್ರಗ್ಸ್ ವಶಪಡಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಮಹಮ್ಮದ್ ಸಫಾನ್(32) ಬಂಧಿತ. ಈತ ಎಂಡಿಎಂಎ ಬೈಕ್‌ನಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಉಳ್ಳಾಲಬೈಲ್ ಪರಿಸರದಲ್ಲಿ ಬೈಕ್ ಸಮೇತ ಪತ್ತೆಹಚ್ಚಿ ಬಂಧಿಸಿದ್ದಾರೆ.


ಬೈಕ್ ಸೀಟಿನಲ್ಲಿಟ್ಟಿದ್ದ 90,000 ರೂ. ಮೌಲ್ಯದ 36 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, ಮೊಬೈಲ್ ಫೋನ್, ಡಿಜಿಟಲ್ ತೂಕಮಾಪಕ ಹಾಗೂ ಬೈಕ್ ಸ್ವಾಧೀನಪಡಿಸಲಾಗಿದೆ. ವಶಪಡಿಸಿದ ಸೊತ್ತಿನ ಒಟ್ಟು ಮೌಲ್ಯ 2,05,500 ರೂ. ಆಗಬಹುದು. ಈ ಬಗ್ಗೆ ಉಳ್ಳಾಲ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


ಆರೋಪಿ ಬೆಂಗಳೂರಿನಿಂದ ಎಂಡಿಎಂಎ ಖರೀದಿಸಿಕೊಂಡು ಬಂದು ಮಂಗಳೂರಿನಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತಿದ್ದ. ಮಾದಕ ವಸ್ತು ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net