ಮಡಿಕೇರಿಯಲ್ಲಿ ಬಸವ ಜಯಂತಿ ಆಚರಣೆ

mdk basava
Published on

ಮಡಿಕೇರಿ:

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವದ ಮಹಾನ್ ಮಾನವತಾವಾದಿ ಬಸವೇಶ್ವರರು 12 ನೇ ಶತಮಾನದಲ್ಲಿಯೇ ನಾಡಿನಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಆದರೆ ರಾಷ್ಟ್ರಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷವಾದರೂ ಎಲ್ಲರೂ ಸಮಾನವಾಗಿ ಬದುಕು ಕಟ್ಟಿಕೊಂಡಿದ್ದಾರೆಯೇ ಎಂಬ ಬಗ್ಗೆ ಆತ್ಮ ವಿಮರ್ಶೆ ಆಗಬೇಕು ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಬುಧವಾರ ನಡೆದ ಸಾಂಸ್ಕೃತಿಕ ನಾಯಕ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದಲ್ಲಿ ಇಂದಿಗೂ ಸಹ ಬಡವರು ಮತ್ತಷ್ಟು ಕಡು ಬಡವರಾಗಿ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿ ಬದುಕು ನಡೆಸುತ್ತಿದ್ದಾರೆ. ಆದರೆ ಬಸವಣ್ಣ ಅವರ ಆಶಯ ಈಡೇರಿದೆಯೇ ಎಂಬುದನ್ನು ಪ್ರತಿಯೊಬ್ಬರೂ ಚಿಂತಿಸಬೇಕು. 12 ನೇ ಶತಮಾನದಲ್ಲಿ ಬಸವೇಶ್ವರರು ಸಮ ಸಮಾಜ ನಿರ್ಮಾಣಕ್ಕೆ ಎಲ್ಲರನ್ನೂ ಒಟ್ಟುಗೂಡಿಸಿ ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸಲು ಪ್ರಯತ್ನಿಸಿದರು. ಆದರೆ ಸಮಾನತೆ ಇನ್ನೂ ತಲುಪಲಿಲ್ಲ, ಸಮಾನರಾಗಿ ಬದುಕುತ್ತಿದ್ದೇವೆ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಶಿಕ್ಷಣ ಪಡೆದರೆ ಎಲ್ಲರೂ ಸಮಾನವಾಗಿ ಬದುಕುತ್ತಾರೆ ಎಂಬುದಾಗಿತ್ತು, ಆದರೆ ಉನ್ನತ ಶಿಕ್ಷಣದ ಜತೆಗೆ ಸಾಕಷ್ಟು ವೃತ್ತಿಪರ ಕೌಲಲ್ಯ ಹೊಂದಬೇಕು. ಅಷ್ಟರ ಮಟ್ಟಿಗೆ ಸ್ಪರ್ಧೆ ಎದುರಿಸಬೇಕಿದೆ. ಜಾತಿ, ಮತ, ಧರ್ಮ, ಲಿಂಗ ತಾರತಮ್ಯ ಇಲ್ಲದೆ ಬಸವಣ್ಣ ಅವರ ಆಶಯದಂತೆ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯ.

ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಬಸವೇಶ್ವರರ ಪ್ರತಿಮೆ ಇದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸುತ್ತೂರು ಶ್ರೀಗಳು ಹಾಗೂ ತುಮಕೂರು ಶ್ರೀಗಳನ್ನು ಆಹ್ವಾನಿಸಿ ಬಸವ ಜಯಂತ್ಯುತ್ಸವ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ ಬಸವೇಶ್ವರರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಬಸವೇಶ್ವರ ವಚನ ಸಂದೇಶಗಳನ್ನು ತಿಳಿದುಕೊಂಡು, ಅದನ್ನು ಪಾಲಿಸುವಂತಾಗಬೇಕು. ಬಸವ ತತ್ವಗಳು ವಿಶಾಲತೆಯಿಂದ ಕೂಡಿದ್ದು, ಬಸವೇಶ್ವರರ ವಚನಗಳು ಎಲ್ಲರ ದಾರಿದೀಪವಾಗಿದೆ. ಪ್ರತಿಯೊಬ್ಬರಲ್ಲಿಯೂ ಅಂತರAಗ ಮತ್ತು ಬಹಿರಂಗದಲ್ಲಿ ಬದಲಾವಣೆ ಕಾಣುತ್ತೇವೆ, ಅಂತರAಗ ಶುದ್ದಿಯಾಗಿರಬೇಕು. ಆಚರಣೆ, ನುಡಿಯಲ್ಲಿ ಒಂದೇ ಇರಬೇಕು. ಎಲ್ಲರಲ್ಲಿಯೂ ಕಾಯಕ ಪ್ರಜ್ಞೆ ಇರಬೇಕು ಎಂದರಲ್ಲದೆ ಕುಶಾಲನಗರದಲ್ಲಿ ಬಸವ ಬಳಗದ ಜಾಗ ಇದ್ದು, "ಬಸವ ಭವನ" ನಿರ್ಮಾಣಕ್ಕೆ ಅಗತ್ಯ ಸಹಕಾರಕ್ಕೆ ಶಾಸಕರಲ್ಲಿ ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಮಾತನಾಡಿ ಬಸವೇಶ್ವರರು 12 ನೇ ಶತಮಾನದಲ್ಲಿ ಅನುಭವ ಮಂಟಪ ಮೂಲಕ ಪ್ರತಿಯೊಬ್ಬರೂ ಸಮಾನರು ಎಂಬ ಸಂದೇಶ ಸಾರಿದರು. ಸ್ತ್ರೀಯರಿಗೆ ಸಮಾನ ಅವಕಾಶ ಕಲ್ಪಿಸಿದರು. ವಚನ ಕ್ರಾಂತಿಯ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. ಯುಗಪುರುಷ ಬಸವಣ್ಣ ಅವರ ವ್ಯಕ್ತಿತ್ವವ ಅಂದರೆ ನಾವು ಮಾಡುವ ಕೆಲಸದ ಮೂಲಕ ದೇವರನ್ನು ಕಾಣಬೇಕು. ಬಸವಣ್ಣ ಅವರು ಶ್ರೇಣೀಕೃತ ವ್ಯವಸ್ಥೆ, ಮೂಡನಂಬಿಕೆ, ಕಂದಾಚಾರ ಹೋಗಲಾಡಿಸಲು ಶ್ರಮಿಸಿದ್ದಾರೆ. ಜಾತಿ, ಧರ್ಮ, ಲಿಂಗಬೇಧವಿಲ್ಲದೆ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದಾರೆ ಎಂದು ಹೇಳಿದರು.

ಸೋಮವಾರಪೇಟೆ ವಿರಕ್ತ ಮಠದ ನಿಶ್ಚಲಾನಂದ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಾರ್ಥಕ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು. ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ 'ಬಸವ ಭವನ' ನಿರ್ಮಾಣಕ್ಕೆ ಜಿಲ್ಲಾಡಳಿತ ವತಿಯಿಂದ ಜಾಗ ಒದಗಿಸುವಂತಾಗಬೇಕು ಎಂದು ಕೋರಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಹೆಚ್.ವಿ. ಶಿವಪ್ಪ ಮಾತನಾಡಿ ಬಸವೇಶ್ವರರ ವಚನಗಳು ಹಾಗೂ ಸಂದೇಶಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಜತೆಗೆ ಅದರಂತೆ ನಡೆದುಕೊಳ್ಳಬೇಕು ಎಂದರು.

ಷಷ್ಠಿ ವಚನ ಗಾಯನ ಹಾಡಿದರು, ವಿಜಯಲಕ್ಷಿö್ಮÃ ಶರಣರ ವಚನ ವಾಚಿಸಿದರು.

ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಶಾಂಭಶಿವಮೂರ್ತಿ, ತಾಲೂಕು ಘಟಕ ಅಧ್ಯಕ್ಷ ರುದ್ರಪ್ರಸನ್ನ, ಆದಿ, ಟಿ.ಜಿ. ಪ್ರೇಮಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪಿ.ಪಿ. ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ನಿವೃತ್ತ ಶಿಕ್ಷಕ ಬಿ.ಸಿ. ಶಂಕರಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net