ಜೋಗಿಗೌಡ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ: ಅವಿರೋಧ ಆಯ್ಕೆಯಾದ ಹಿರಿಯ ಸಹಕಾರಿ

1 (6)
Published on

ಮಂಡ್ಯ: ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಎಂಡಿಸಿಸಿ)ನಲ್ಲಿ ಅಧಿಕಾರವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿದೆ. ಅಂತೆಯೇ ನಿರೀಕ್ಷೆಯಂತೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ, ಹಿರಿಯ ಸಹಕಾರಿ ಧುರೀಣ ಕೆ.ಸಿ.ಜೋಗಿಗೌಡ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಮನಿರ್ದೇಶಿತ ನಿರ್ದೇಶಕ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸಿ.ಪಿ.ಉಮೇಶ್ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಜೋಗಿಗೌಡ ಹಾಗೂ ಹಾಲಹಳ್ಳಿ ಅಶೋಕ್ ಆಕಾಂಕ್ಷಿತರಾಗಿದ್ದರು. ಆದರೆ ಗುರುವಾರ ಸಂಜೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಶೋಕ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಜೋಗಿಗೌಡ ಅವರಿಗೆ ಮಣೆ ಹಾಕಲಾಗಿದೆ.

ಇನ್ನು ನಿಗದಿಯಂತೆ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಕ್ರಿಯೆ ನಡೆಯಿತು. ಕೈಗಾರಿಕೆ ಮತ್ತು ಇತರೆ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದ ಕೆ.ಸಿ.ಜೋಗಿಗೌಡ ಅವರನ್ನು ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರು ಘೋಷಿಸಿದರು.

ಪ್ರಸ್ತುತ ಕಾಂಗ್ರೆಸ್ ಮೂವರು ನಾಮನಿರ್ದೇಶಿತ ಸದಸ್ಯರು ಸೇರಿ 9 ಸ್ಥಾನವನ್ನು ಪಡೆದಿದ್ದು, ಜೆಡಿಎಸ್ ನಾಲ್ವರು ನಿರ್ದೇಶಕರನ್ನು ಹೊಂದಿದೆ. ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಅಮರಾವತಿ ಅಶ್ವಥ್ ಹಾಗೂ ಮದ್ದೂರು ತಾಲೂಕಿನ ಸಂದರ್ಶ ಅವರು ಪ್ರಸ್ತುತ ನಿರ್ದೇಶಕರಾಗಿದ್ದಾರೆ. ಆದರೆ ಅವರು ಯಾವ ಪಕ್ಷದ ಬೆಂಬಲಿತರು ಎಂಬುದು ಸ್ಪಷವಾಗಿಲ್ಲ. 2020ರಲ್ಲಿ ನಡೆದ ಪ್ರಥಮ ಅವಧಿಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಸಿ.ಪಿ.ಉಮೇಶ್ ಜೆಡಿಎಸ್ ನಿರ್ದೇಶಕರು ಹಾಗೂ ನಾಮ ನಿರ್ದೇಶಿತ ಅಧಿಕಾರಿಗಳ ಬೆಂಬಲ ಪಡೆದು ಅಧ್ಯಕ್ಷ ಸ್ಥಾನಕ್ಕೇರಿದ್ದರು. ಅಧ್ಯಕ್ಷರಾಗಿ ಎರಡೂವರೆ ವರ್ಷ ಅಧಿಕಾರ ನಡೆಸಿದ ಸಿ.ಪಿ.ಉಮೇಶ್ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಬಹುಮತ ದೊರಕಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಿಂದಿನ ಚುನಾವಣೆ ವೇಳೆ ಜೋಗಿಗೌಡ ಅವರು ಅಧ್ಯಕ್ಷರಾಗಲಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು. ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಜೋಗಿಗೌಡ ಅವರು ಅಧ್ಯಕ್ಷ ಸ್ಥಾನ ಅಲಂಕರಿಸುವುದು ಸಾಧ್ಯವಾಗಿರಲಿಲ್ಲ.

ನೂತನ ಅಧ್ಯಕ್ಷ ಕೆ.ಸಿ.ಜೋಗಿಗೌಡ ಮಾತನಾಡಿ, ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ನರೇಂದ್ರಸ್ವಾಮಿ ಮಾರ್ಗದರ್ಶನದಲ್ಲಿ ಜಿಲ್ಲೆಯ ಶಾಸಕರು ಹಾಗೂ ನಿರ್ದೇಶಕರ ಸಹಕಾರದೊಂದಿಗೆ ಬ್ಯಾಂಕ್‌ನ ಅಭಿವೃದ್ಧಿಗೆ ಶ್ರಮಿಸಲಾಗುವುದೆಂದು ತಿಳಿಸಿದರು.

ರಮೇಶ ಬಂಡಿಸಿದ್ದೇಗೌಡ ನಾಮನಿರ್ದೇಶನ: ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಸರ್ಕಾರದ ನಾಮ ನಿರ್ದೇಶಕರೊಬ್ಬರನ್ನು ನಾಮಕರಣ ಮಾಡುವ ಅವಕಾಶವಿದ್ದು, ಅದರಂತೆ ಅನಿರೀಕ್ಷಿತ ಎನ್ನುವಂತೆ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರಿಗೆ ಒಲಿಯಿತು. ನಿರ್ದೇಶಕ ಸ್ಥಾನಕ್ಕಾಗಿ ಹಲವು ಪ್ರಭಾವಿಗಳು ಒತ್ತಡ ತಂದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಯಾವುದೇ ಅಪಸ್ವರ ಉಂಟಾಗದಂತೆ ಜಾಣ್ಮೆ ಮೆರೆದ ಚಲುವರಾಯಸ್ವಾಮಿ ಮತ್ತು ಪಿ.ಎಂ.ನರೇಂದ್ರಸ್ವಾಮಿ ಅವರು ರಮೇಶ ಬಂಡಿಸಿದ್ದೇಗೌಡ ಅವರನ್ನು ತಾತ್ಕಾಲಿಕವಾಗಿ ನಾಮ ನಿರ್ದೇಶನ ಸ್ಥಾನಕ್ಕೆ ಆಯ್ಕೆಗೊಳಿಸಿ ಚುನಾವಣೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯುವಂತೆ ತಂತ್ರಗಾರಿಕೆ ಎಣಿಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net