ಭದ್ರವಾಗಿದೆ ದೇಶದ ಆರ್ಥಿಕತೆ: ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಶ್ಲಾಘನೆ

C.P.Umesh Mandya
Published on

ಮಂಡ್ಯ: ಮುಂದಿನ ಐದು ವರ್ಷದ ಮಾರ್ಗಸೂಚಿ ಎನ್ನಿಸಿಕೊಂಡಿದ್ದ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ 3.0 ವಿಕಸಿತ ಬಜೆಟ್ ದೇಶದ ಆರ್ಥಿಕತೆ ಭದ್ರವಾಗಿದೆ ಎನ್ನುವುದನ್ನು ತೋರಿಸಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರೂ ಆದ ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಹೇಳಿದ್ದಾರೆ.

ಸತತ ಏಳನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು ಕೃಷಿ, ಉದ್ಯೋಗ, ಸಾಮಾಜಿಕ ನ್ಯಾಯ ಸೇರಿದಂತೆ ಹಲವು ಕ್ಷೇತ್ರಕ್ಕೆ ಆದ್ಯತೆ ನೀಡಿದ್ದಾರೆ. ಪ್ರಮುಖವಾಗಿ ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ ಅನುದಾನ ಮೀಸಲು, 400 ಜಿಲ್ಲೆಗಳಲ್ಲಿ ಡಿಜಿಟಲ್ ರೂಪದಲ್ಲಿ ಬೆಳೆ ಸಮೀಕ್ಷೆ, ತರಕಾರಿ ಮಾರುಕಟ್ಟೆ ಆರಂಭ, ಎಣ್ಣೆ ಬೀಜ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ಉತ್ತೇಜನಕ್ಕೆ ಒತ್ತು ನೀಡಿದ್ದಾರೆ. ಇದಲ್ಲದೆ ಉದ್ಯೋಗಿಗಳನ್ನು ಪ್ರೋತ್ಸಾಹಿಸಲು ಹೊಸದಾಗಿ ಕೆಲಸಕ್ಕೆ ಸೇರುವವರಿಗೆ ಒಂದು ತಿಂಗಳ ವೇತನದ ಪ್ರೋತ್ಸಾಹ ಧನ, ಉದ್ಯೋಗದಾತರನ್ನು ಬೆಂಬಲಿಸುವ ಯೋಜನೆ, ಮಹಿಳಾ ಉದ್ಯೋಗಿಗಳಿಗೆ ಹಾಸ್ಟೆಲ್, 20 ಲಕ್ಷ ಯುವಸಮೂಹಕ್ಕೆ ಕೌಶಲಾಭಿವೃದ್ಧಿ ಯೋಜನೆ, 1000 ಕೈಗಾರಿಕಾ ತರಬೇತಿ ಕೇಂದ್ರ ಸ್ಥಾಪನೆ ಶ್ಲಾಘನೀಯ ಎಂದಿದ್ದಾರೆ.

ಇದಲ್ಲದೆ ಸ್ವಂತ ಉದ್ಯಮ ಪ್ರಾರಂಭಿಸುವವರನ್ನು ಪ್ರೋತ್ಸಾಹಿಸಲು ಮುದ್ರಾ ಯೋಜನೆಯಡಿ ನೀಡಲಾಗುತ್ತಿದ್ದ ಸಾಲವನ್ನು 10 ಲಕ್ಷ ರೂನಿಂದ 20 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಕ್ಯಾನ್ಸರ್ ಔಷಧದ ಮೇಲಿನ ಕಸ್ಟಮ್ ಸುಂಕವನ್ನು ತೆರವುಗೊಳಿಸಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣದಿಂದಾಗಿ ಬಡವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಒಟ್ಟಾರೆ ಎಲ್ಲ ವರ್ಗದವರಿಗೆ ನೆರವಾಗುವ ಅತ್ಯುತ್ತಮ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net