

ಮಂಡ್ಯ: ಮಾಜಿ ಸಂಸದ ಡಾ.ಜಿ.ಮಾದೇಗೌಡ ಮತ್ತು ಮಾಜಿ ಸಿಎಂ ಎಸ್.ಎಂ.ಕೃಷ್ಣ ರಾಜ್ಯಕ್ಕೆ ಮಾದರಿ ರಾಜಕಾರಣಿಗಳಾಗಿ ಗುರುತಿಸಿಕೊಂಡಿದ್ದರು. ಅಂತಹವರ ಕುಟುಂಬದವರನ್ನು ಕಾಂಗ್ರೆಸ್ ಪಕ್ಷ ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ ಎಂದು ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರ ವರ್ತನೆಯಿಂದಾಗಿ ಇಬ್ಬರು ಮಹಾನ್ ನಾಯಕರ ಕುಟುಂಬದ ರಾಜಕೀಯ ಭವಿಷ್ಯವೇ ಅಂತ್ಯವಾಗುತ್ತಾ ಬಂದಿದೆ. ಎಸ್.ಎಂ.ಕೃಷ್ಣ ಸಹೋದರನ ಪುತ್ರ ಎಸ್.ಗುರುಚರಣ್ ಅವರಿಗೆ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಅವಕಾಶ ನೀಡಲಿಲ್ಲ. ಪಕ್ಷಕ್ಕಾಗಿ ದುಡಿದ ಅವರ ಸೇವೆಯನ್ನು ಗುರುತಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮತ್ತೊಂದೆಡೆ ಡಾ.ಜಿ.ಮಾದೇಗೌಡ ಅವರು ಆರು ಬಾರಿ ಶಾಸಕ ಹಾಗೂ ಎರಡು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಪುತ್ರ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುತ್ತಿದ್ದೇನೆ ಎಂದು ಹೇಳಿಕೆ ನೀಡಿರುವುದು ಅಘಾತ ಉಂಟು ಮಾಡಿದೆ. ಅಂದರೆ ಕಾಂಗ್ರೆಸ್ ಅವರನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲ ಎಂಬುದು ಹೇಳಿಕೆಯಿಂದ ತಿಳಿಯುತ್ತಿದೆ ಎಂದರು.
ಮಧು ಮಾದೇಗೌಡ ಅವರು ರಾಜಕಾರಣದಿಂದ ತಟಸ್ಥರಾಗಿ ಉಳಿಯಬಾರದು. ಅವರ ಸೇವೆ ಮಂಡ್ಯ ಜಿಲ್ಲೆಗೆ ಅಗತ್ಯವಾಗಿದೆ. ಮಧು ಮಾದೇಗೌಡರು ನಮ್ಮ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಕ್ಕೆ ಜತೆಯಾಗಬೇಕು. ಪ್ರಧಾನಮಂತ್ರಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಮಾಜಿ ಸಿಎಂಗಳಾದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಬೇಕು. ಬಿಜೆಪಿಯಲ್ಲಿ ಮುಂದಿನ ದಿನಗಳಲ್ಲಿ ಅವರಿಗೆ ದೊಡ್ಡ ಭವಿಷ್ಯವಿದೆ. ಅವರನ್ನು ಪಕ್ಷ ಗೌರವಯುತವಾಗಿ ನಡೆಸಿಕೊಳ್ಳಲಿದೆ. ಮೈತ್ರಿಕೂಟ ಬೆಂಬಲಿಸಿದರೆ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವುದರ ಬಗ್ಗೆ ಹೈಕಮಾಂಡ್ ಜತೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.
ಗೋಲ್ಡ್‌ಪಿಂಚ್‌ನಲ್ಲಿ ಗೌಪ್ಯ ಮಾತುಕತೆ?: ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಟಸ್ಥವಾಗಿರುವುದಾಗಿ ಮಧು ಮಾದೇಗೌಡ ಅವರು ಘೋಷಣೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಂಡಿದ್ದಾರೆ. ಕೆಲವೇ ದಿನದಲ್ಲಿ ಎಂಪಿ ಚುನಾವಣೆ ಘೋಷಣೆಯಾಗುವುದರಿಂದ ಅಸಮಾಧಾನ ಮುಂದುವರೆಯದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ. ಮಾತ್ರವಲ್ಲದೆ ವಿಪಕ್ಷಗಳಿಗೆ ಅಸ್ತ್ರವಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಅದರಂತೆ ಗುರುವಾರ ರಾತ್ರಿ ಕಾಂಗ್ರೆಸ್ ನಾಯಕರು ಬೆಂಗಳೂರಿನ ಗೋಲ್ಡ್‌ಪಿಂಚ್‌ನಲ್ಲಿ ಗೌಪ್ಯ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.