

ಮಂಡ್ಯ: ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಎಂಡಿಸಿಸಿ)ನ ಆಡಳಿತ ಮಂಡಳಿ ಹಾಗೂ ಮೇಲಧಿಕಾರಿಗಳ ವರ್ತನೆಗೆ ನೌಕರರು ಬೇಸತ್ತಿದ್ದಾರೆ. ತಮಗೆಂದು ನೀಡಿರುವ ಸೌಲಭ್ಯ ಪಡೆದುಕೊಳ್ಳಲು ಸರ್ಕಾರದ ಮೊರೆ ಹೋಗಿದ್ದಾರೆ.
ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ನೀಡಿರುವ ಹಲವು ಸೌಕರ್ಯವನ್ನು ಕೊಡದೇ ವಂಚಿಸಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಸ್ಪಕಾರಾತ್ಮಕ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ನೌಕರರು ಮುಂದಿನ ಹಂತಹ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಈ ಸಂಬಂಧ ಜ.27ರಂದು ಸಹಕಾರ ಸಚಿವ ಎನ್.ರಾಜಣ್ಣ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ತಮ್ಮ ಮನವಿಗೆ ಸ್ಪಂದಿಸುವಂತೆ ಕೇಳಿಕೊಂಡಿದ್ದಾರೆ. ನೌಕರರ ಮನವಿಯ ಪ್ರತಿ ವಿಜಯವಾಣಿಗೆ ಲಭ್ಯವಾಗಿದೆ.
ಪರಿಷ್ಕೃತ ವೇತನ ನೀಡಿಲ್ಲ: ಬ್ಯಾಂಕಿನ ನೌಕರರಿಗೆ ರಾಜ್ಯ ಸರ್ಕಾರದ 7ನೇ ವೇತನ ಆಯೋಗದ ಶಿಾರಸಿನಂತೆ ಮಧ್ಯಂತಹ ಪರಿಹಾರ ವೇತನ ನೀಡಲಾಗಿದೆ. ಆದರೆ ಆಯೋಗದ ಅಂತಿಮ ವರದಿಯ ಆದೇಶದಂತೆ ಬ್ಯಾಂಕಿನ ನೌಕರರಿಗೆ ಪರಿಷ್ಕೃತ ವೇತನ ಹೆಚ್ಚಳ ಮಾಡಿ ನೀಡಿಲ್ಲವೆನ್ನುವ ಗಂಭೀರ ಆರೋಪ ಕೇಳಿಬಂದಿದೆ. ಅಂದರೆ ಇದರಿಂದಾಗಿ ಬ್ಯಾಂಕ್‌ನ 417 ನೌಕರರು ಸೌಲಭ್ಯದಿಂದ ವಂಚಿತರಾಗುವಂತಾಗಿದೆ.
ಬ್ಯಾಂಕ್ 2023-24ನೇ ಸಾಲಿನಲ್ಲಿ ಇತಿಹಾಸದಲ್ಲಿಯೇ ಹೆಚ್ಚು ಅಂದರೆ ಸುಮಾರು 14 ಕೋಟಿ ರೂ ನಿವ್ವಳ ಲಾಭ ಗಳಿಸಿದರೂ ಸಹ ನೌಕರರಿಗೆ ನಿಯಮಾನುಸಾರ ಬೋನಸ್ ನೀಡದೇ ತಪ್ಪು ಲೆಕ್ಕಪತ್ರದಿಂದ ಬ್ಯಾಂಕ್ ಹೆಚ್ಚು ಲಾಭ ಗಳಿಸಿದೆ ಎಂದು ತೋರಿಸಲಾಗಿದೆ. ರಾಜ್ಯಸರ್ಕಾರ ತನ್ನ ನೌಕರರಿಗೆ ನೀಡುವ ವೇತನ ಹಾಗೂ ಭತ್ಯೆಯಂತೆ ಬ್ಯಾಂಕ್ ಸಹ ತನ್ನ ನೌಕರರಿಗೆ ವೇತನ ಮತ್ತು ಭತ್ಯೆ ನೀಡಲು ಆಡಳಿತ ಮಂಡಳಿ ಮತ್ತು ನೌಕರರ ಮಧ್ಯ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಜಂಟಿ ಸಹಿಯಾಗಿದೆ. ಇದರಂತೆ ಕಾಲಕಾಲಕ್ಕೆ ನೌಕರರಿಗೆ ತುಟ್ಟಿಭತ್ಯೆ ನೀಡದೇ ಬಾಕಿ ಉಳಿಸಿಕೊಳ್ಳಲಾಗಿದೆ. ಬ್ಯಾಂಕ್‌ನಲ್ಲಿ ಒಂದೇ ಹುದ್ದೆಯಲ್ಲಿ 10 ಹಾಗೂ 15 ವರ್ಷ ಸೇವೆ ಪೂರ್ಣಗೊಳಿಸದ ನೌಕರರಿಗೆ ವೇತನ ಬಡ್ತಿ ಹಾಗೂ ನೌಕರರಿಗೆ ವಾರ್ಷಿಕ ವೇತನ ಬಡ್ತಿ ನೀಡಿಲ್ಲವೆನ್ನುವ ಆರೋಪ ಕೇಳಿಬಂದಿದೆ.
ಹೊಸದಾಗಿ ನೇಮಕಾತಿಗೆ ಆಕ್ಷೇಪ: ಬ್ಯಾಂಕ್‌ನಲ್ಲಿ ಹೊಸದಾಗಿ ನೇಮಕಾತಿ ಮಾಡಿಕೊಳ್ಳುವುದಕ್ಕೂ ನೌಕರರು ಆಕ್ಷೇಪಿಸಿದ್ದಾರೆ. ಇದಕ್ಕೆ ವಿವರಣೆ ನೀಡಿರುವ ನೌಕರರು, ಕೆಲ ಅನಾವಶ್ಯಕ ಹುದ್ದೆಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿ ಕೃತಕವಾಗಿ ಸಿಬ್ಬಂದಿ ಕೊರತೆ ತೋರಿಸಲಾಗಿದೆ. ವಾಸ್ತವವಾಗಿ ಹಾಲಿ ಇರುವ ಸಿಬ್ಬಂದಿಯಿಂದಲೇ ಎಲ್ಲ ಕೆಲಸವನ್ನು ನಿರ್ವಹಿಸಿಕೊಂಡು ಹೋಗಬಹುದಾಗಿದೆ. ಆದ್ದರಿಂದ ಹೊಸದಾಗಿ ನೇಮಕಾತಿ ಮಾಡಿಕೊಳ್ಳುವಂತೆ ನೌಕರರು ಆಡಳಿತ ಮಂಡಳಿಯನ್ನು ಕೋರಿಲ್ಲ.
ಇನ್ನು ಈಗಾಗಲೇ ಹೊಸ ಗಣಕಯಂತ್ರ ಹಾಗೂ ಸ್‌ಟಾವೇರ್ ಅಳವಡಿಸಿಕೊಂಡು ಖಾಸಗಿ ಮತ್ತು ವಾಣಿಜ್ಯ ಬ್ಯಾಂಕ್‌ಗಳಿಗೆ ಪೈಪೋಟಿ ನೀಡಿ ಕೆಲಸವನ್ನು ನಿರ್ವಹಿಸಿಕೊಂಡು ಹೋಗಲಾಗುತ್ತಿದೆ. ಆದ್ದರಿಂದ ಬ್ಯಾಂಕಿಗೆ ಮಾನವ ಸಂಪನ್ಮೂಲದ ಕೊರತೆ ಇಲ್ಲ. 1997, 2003, 2010, 2014 ಹಾಗೂ 2017ರಲ್ಲಿ ಕಿರಿಯ ಸಹಾಯಕ ಹುದ್ದೆಗೆ ಪದವಿ ವಿದ್ಯಾರ್ಹತೆ ನಿಗದಿಪಡಿಸಲಾಗಿತ್ತು. ರಾಜ್ಯಸರ್ಕಾರದ ಎ್ಡಿಎ ವೇತನ ಶ್ರೇಣಿಯಲ್ಲಿ ವೇತನ ಪಾವತಿಸಲಾಗುತ್ತಿದೆ. ಆದರೆ ಪ್ರಸ್ತುತ ಕಿರಿಯ ಸಹಾಯಕ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ನಿಗದಿಪಡಿಸಿ ರಾಜ್ಯಸರ್ಕಾರದ ಎ್ಡಿಎ ವೇತನ ಶ್ರೇಣಿ ನಿಗದಿಪಡಿಸಲಾಗಿದೆ. ಇಂತಹ ಧೋರಣೆಯಿಂದಾಗಿ ಪದವಿ ವಿದ್ಯಾರ್ಹತೆಯೊಂದಿಗೆ ಹುದ್ದೆ ಪಡೆದಿರುವ ನೌಕರರ ನಡುವೆ ತಾರತಮ್ಯ ಉಂಟು ಮಾಡಲಿದೆ. ಮಾತ್ರವಲ್ಲದೆ ಇಂತಹ ನೇಮಕಾತಿಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.
ಇದಲ್ಲದೆ ಬ್ಯಾಂಕಿನ ನಿಯಂತ್ರಣದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ವಿದ್ಯಾರ್ಹತೆ ಸಹಕಾರಿ ಸಂಘದ ಕಾಯ್ದೆ ಮತ್ತು ನಿಯಮಾನುಸಾರ ಪದವಿಯಾಗಿದೆ. ಇಂತಹದ ಮೇಲ್ವಿಚಾರಣೆಯನ್ನು ಬ್ಯಾಂಕಿನ ಕಿರಿಯ ಸಹಾಯಕ ಹುದ್ದೆಗೆ ಪಿಯುಸಿ ವಿದ್ಯಾರ್ಹತೆಯಿಂದ ಆಯ್ಕೆಯಾಗಿ ಬಂದವರು ಮೇಲ್ವಿಚಾರಣೆ ಮಾಡುವುದು ಸಮಂಜಸವಲ್ಲ. ಬ್ಯಾಂಕ್ ತನ್ನ ಅಭಿವೃದ್ಧಿ ಸಾಧನೆಗಾಗಿ ನಿಗದಿತ ಠೇವಣಿ ಸಂಗ್ರಹಣೆ ಗುರಿ, ನೀಡಿಕೆಯ ಗುರಿ, ವಸೂಲಾತಿ ಗುರಿಯನ್ನು ಹಾಕಿಕೊಂಡಿದ್ದರೂ ಈವರೆಗೂ ಯಾವುದೇ ಗುರಿ ಸಾಧನೆ ಸಾಧ್ಯವಾಗಿಲ್ಲ.
ಮುಖ್ಯವಾಗಿ ಹಲವು ವರ್ಷದಿಂದ ಸೇವೆ ಸಲ್ಲಿಸಿಕೊಂಡು ಬಂದಿರುವ ನೌಕರರಿಗೆ ವೇತನ ಮತ್ತು ಭತ್ಯೆ ಸೌಲಭ್ಯ ನೀಡದೇ ತಪ್ಪು ಲೆಕ್ಕಪತ್ರ ನೀಡುವ ಮೂಲಕ ಹೊಸ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳುತ್ತಿರುವುದು ಹಾಲಿ ಸಿಬ್ಬಂದಿ ಹಾಗೂ ಆರ್ಥಿಕ ವ್ಯವಹಾರಕ್ಕೆ ತೊಂದರೆಯಾಗಲಿದೆ. ಇದನ್ನು ಮೀರಿ ನೇಮಕಾತಿ ಮಾಡಿಕೊಂಡರೆ ಎದುರಾಗುವ ಸಮಸ್ಯೆಗೆ ಆಡಳಿತ ಮಂಡಳಿ ಹೊಣೆ ಹೊರಬೇಕಾಗುತ್ತದೆ. ಅಂತೆಯೇ ನಮ್ಮ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಸಮಸ್ಯೆಗೆ ಬಗೆಹರಿಸುವ ಭರವಸೆ: ನೌಕರರು ಸಲ್ಲಿಸಿರುವ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಹಕಾರ ಸಚಿವ ಎನ್.ರಾಜಣ್ಣ ಈ ಬಗ್ಗೆ ಗಮನಹರಿಸಲಾಗುವುದು ಎನ್ನುವ ಭರವಸೆ ನೀಡಿದ್ದಾರೆ. ಹೊಸದಾಗಿ ನೇಮಕಾತಿ ಮಾಡಿಕೊಳ್ಳಲಿ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ನಮಗೆ ಕೊಡಬೇಕಾದ ಸೌಲಭ್ಯ ಬಂದರೆ ಸಾಕಷ್ಟೇ ಎಂದು ನೊಂದ ನೌಕರರೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.
ಯಾರ ಕಿಸೆಗೆ ನೌಕರರ ಹಣ?: ಏಳನೇ ವೇತನ ಆಯೋಗದ ಶಿಾರಸಿನಂತೆ ಪರಿಷ್ಕೃತಗೊಂಡಿರುವ ವೇತನ, ತುಟ್ಟಿಭತ್ಯೆ, ಬೋನಸ್ ನೀಡಿಲ್ಲವೆನ್ನುವುದು ನೌಕರರ ಗಂಭೀರ ಆರೋಪವಾಗಿದೆ. ಹಾಗೆಂದ ಮೇಲೆ 417 ನೌಕರರಿಗೆ ಸೇರಿದ ಹಣ ಯಾರ ಕಿಸೆ ಸೇರಿದೆ ಎನ್ನುವುದು ಸಧ್ಯದ ಪ್ರಶ್ನೆಯಾಗಿದೆ.