ಒಗ್ಗಟ್ಟಿನಿಂದ ಚುನಾವಣೆ ಮಾಡೋಣ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

MDCC Bank election campaign Mandya
Published on

ಮಂಡ್ಯ: ಪಕ್ಷದ ಮುಖಂಡರ ನಡುವೆ ಯಾವುದೇ ಸಣ್ಣಪುಟ್ಟ ಕೋಪವಿದ್ದರೂ ಬಗೆಹರಿಸಿಕೊಳ್ಳೋಣ. ಅದೇ ರೀತಿ ಒಗ್ಗಟ್ಟಿನಿಂದ ಚುನಾವಣೆ ಮಾಡುವ ಮೂಲಕ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚು ಲೀಡ್‌ನಿಂದ ಗೆಲ್ಲಿಸೋಣ ಎಂದು ಶಾಸಕ ರವಿಕುಮಾರ್ ಗಣಿಗ ಕರೆ ನೀಡಿದರು.

ತಾಲೂಕಿನ ಕಟ್ಟೆದೊಡ್ಡಿ ಗ್ರಾಮದಲ್ಲಿ ಆಯೋಜಿಸಿದ್ದ ಎಂಡಿಸಿಸಿ ಬ್ಯಾಂಕ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮ ವಹಿಸಿ ಕೆಲಸ ಮಾಡೋಣ. ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಸೂಚನೆ ಮೇರೆಗೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಈ ಚುನಾವಣೆಯಲ್ಲಿ ಪಕ್ಷದ ನಾಯಕರೇ ಸ್ಪರ್ಧೆ ಮಾಡಬಹುದಿತ್ತು. ಆದರೆ ನಾಯಕರಂತೆ ಸಮಾನ ಅಧಿಕಾರ ಕಾರ್ಯಕರ್ತರು ಹಾಗೂ ಪಕ್ಷಕ್ಕೆ ದುಡಿದವರಿಗೂ ಹಂಚಿಕೆಯಾಗಬೇಕೆನ್ನುವುದು ನಮ್ಮ ಉದ್ದೇಶ ಎಂದರು.

ಪಕ್ಷವನ್ನು ನಂಬಿ ದುಡಿದವರಿಗೆ ಅಧಿಕಾರ ಸಿಗಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡುವ ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಹಲವರಿಗೆ ನಿಗಮ-ಮಂಡಳಿಗಳಲ್ಲಿ ಅಧಿಕಾರ ನೀಡಲಾಗಿದೆ. ಪಕ್ಷ ಅಧಿಕಾರದಲ್ಲಿರುವುದರಿಂದ ಕಾರ್ಯಕರ್ತರಿಗೆ ಅಧಿಕಾರ ಸಿಗುತ್ತಿದೆ. ಕಾಂಗ್ರೆಸ್ ಇದ್ದರೆ ನಾವು. ಆದ್ದರಿಂದ ಒಗ್ಗಟ್ಟಿನಿಂದ ಚುನಾವಣೆ ಮಾಡೋಣ. ಕಳೆದ ಚುನಾವಣೆಯಲ್ಲಿ ಬೆರೆಳೆಣಿಕೆ ಮತಗಳಲ್ಲಿ ನಮ್ಮ ಅಭ್ಯರ್ಥಿ ಸೋಲು ಅನುಭವಿಸುವಂತಾಗಿತ್ತು. ಈ ಬಾರಿ ಸಾಧ್ಯವಾದಷ್ಟು ಅವಿರೋಧ ಆಯ್ಕೆಗೆ ಪ್ರಯತ್ನ ಮಾಡೋಣ. ಒಂದು ವೇಳೆ ಸಾಧ್ಯವಾಗದಿದ್ದರೆ ಸಮರ್ಥವಾಗಿಯೇ ಚುನಾವಣೆ ಎದುರಿಸೋಣ. ಜನವರಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬರಲಿದೆ. ಕಾರ್ಯಕರ್ತರನ್ನು ಗೆಲ್ಲಿಸುವ ಹೊಣೆ ನಮ್ಮದು ಎಂದು ಹೇಳಿದರು.

ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್, ಮುಡಾ ಅಧ್ಯಕ್ಷ ನಯೀಂ, ಮುಖಂಡ ರವಿ ಭೋಜೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net