ಕಮಲಕ್ಕೆ ಜಿಗಿದ ಎಂಡಿಎಲ್, ಅನಿಲ್‌ಕುಮಾರ್

laxminarayan
Published on

ತುಮಕೂರು: ನಿರೀಕ್ಷೆಯಂತೆಯೇ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಹಾಗೂ ಕೆಎಎಸ್ ಹುದ್ದೆಗೆ ರಾಜೀನಾಮೆ ನೀಡಿ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅನಿಲ್‌ಕುಮಾರ್ ಕಮಲ ಪಾಳಯಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.


ದೊಡ್ಡಬಳ್ಳಾಪುರದಲ್ಲಿ ಶನಿವಾರ ನಡೆದ ‘ಜನಸ್ಪಂದನ’ದಲ್ಲಿ ಉಭಯ ನಾಯಕರು ಬಿಜೆಪಿಗೆ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿಎಲ್‌ಪಿ ಮುಖಂಡ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿ ಕಾಂಗ್ರೆಸ್ ತೊರೆದಿದ್ದ ಎಂಡಿಎಲ್ ಮಾತೃ ಪಕ್ಷ ಬಿಜೆಪಿಗೆ ಸೇರ್ಪಡೆ ಘೋಷಿಸಿದ್ದರು.


ಈ ಹಿಂದೆ ತುರುವೇಕೆರೆ ಕ್ಷೇತ್ರದಿಂದ ಬಿಜೆಪಿಯಿಂದಲೇ ಗೆದ್ದಿದ್ದ ಎಂಡಿಎಲ್, ಬಿಎಸ್‌ವೈ ಸಿಎಂ ಆಗಿದ್ದಾಗ ವಿಧಾನ ಪರಿಷತ್‌ಗೂ ನಾಮನಿರ್ದೇಶನಗೊಂಡಿದ್ದರು. ಈಗ ಕಾಂಗ್ರೆಸ್‌ನಲ್ಲಿ ಅಧಿಕಾರ ಸಿಗದ ಹಿನ್ನೆಲೆಯಲ್ಲಿ ಮಾತೃ ಪಕ್ಷಕ್ಕೆ ವಾಪಸಾಗಿದ್ದು, ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆ ನೀಡಿಲ್ಲ.


1994, 1999, 2004, 2008, 2009ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತುರುವೇಕೆರೆ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಎಂ.ಡಿ.ಲಕ್ಷ್ಮೀನಾರಾಯಣ 1999ರಲ್ಲಿ ಒಮ್ಮೆ ಮಾತ್ರ ಶಾಸಕರಾಗಿದ್ದರು. 2012ರಿಂದ 2018ರ ವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದರು.


2004ರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೂಡ ಆಗಿದ್ದರು, ಬಿಜೆಪಿ ಸರ್ಕಾರದಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದರು. ಬಿಎಸ್‌ವೈ ಜತೆ ಕೆಜೆಪಿಗೆ ಬಂದಿದ್ದ ಎಂಡಿಎಲ್ ಬಗ್ಗೆ ಬಿಜೆಪಿ ಗರಂ ಆಗಿದ್ದ ಹಿನ್ನೆಲೆಯಲ್ಲಿ ಬಿಎಸ್‌ವೈ ಜತೆ ಬಿಜೆಪಿಗೆ ವಾಪಸಾಗಲು ಸಾಧ್ಯವಾಗದೆ ಅನಿವಾರ್ಯವಾಗಿ ಕಾಂಗ್ರೆಸ್ ಸೇರಿದ್ದರು. 2018ರಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಠೇವಣಿ ಬಂದಿರಲಿಲ್ಲ, ನಂತರ ನೇಕಾರ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ವಿಧಾನ ಪರಿಷತ್ ಟಿಕೆಟ್‌ಗೆ ಲಾಬಿ ನಡೆಸಿದರೂ ಪ್ರಯೋಜನವಾಗದೆ ಪಕ್ಷ ತ್ಯಜಿಸಿದ್ದರು.


ಜೆಡಿಎಸ್‌ಗೆ ಕೈಕೊಟ್ಟ ಅನಿಲ್‌ಕುಮಾರ್: ಇತ್ತೀಚೆಗಷ್ಟೇ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅನಿಲ್‌ಕುಮಾರ್ ವರ್ಷ ತುಂಬುವುದರೊಳಗೆ ಜೆಡಿಎಸ್‌ಗೆ ಗುಡ್‌ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಟಿಕೆಟ್ ನೀಡಿದ್ದರೂ ನಿಷ್ಠೆ ತೋರದೆ ಪಕ್ಷ ತ್ಯಜಿಸಿರುವ ಅನಿಲ್‌ಕುಮಾರ್ ಬಗ್ಗೆ ಜೆಡಿಎಸ್ ಅತೃಪ್ತಿ ವ್ಯಕ್ತಪಡಿಸಿದೆ. ದೊಡ್ಡಬಳ್ಳಾಪುರ ಸಮಾವೇಶದಲ್ಲಿ ಜಿಲ್ಲೆಯ ಇಬ್ಬರು ಬಿಜೆಪಿಗೆ ಸೇರ್ಪಡೆಯಾಗಿದ್ದು ಮುಂದಿನ ದಿನದಲ್ಲಿ ಎಲ್ಲ ಪಕ್ಷಗಳಲ್ಲಿಯೂ ಹೋಗುವವರು, ಬರುವವರು ಕಾಣಿಸಿಕೊಳ್ಳಲಿದ್ದಾರೆ.

ಎಸ್‌ಪಿಎಂ ಬಿಜೆಪಿ ಸೇರ್ಪಡೆಗೆ ಪಿತೃಪಕ್ಷ ಅಡ್ಡಿ!?: ಜಿಲ್ಲೆಯ ಪ್ರಭಾವಿ ಮುಖಂಡ ಎಸ್. ಪಿ.ಮುದ್ದಹನುಮೇಗೌಡ ಅವರ ಪಕ್ಷಾಂತರ ಮತ್ತೊಂದು ತಿಂಗಳು ಮುಂದೂಡಿಕೆಯಾಗಿದೆ. ದೊಡ್ಡಬಳ್ಳಾಪುರದಲ್ಲಿ ನಡೆದ ಸಮಾವೇಶದಲ್ಲಿ ಎಸ್‌ಪಿಎಂ ಸೇರ್ಪಡೆಯಾಗದಿರುವುದು ಕುತೂಹಲ ಹೆಚ್ಚಿಸಿದೆಯಾದರೂ ಪಿತೃಪಕ್ಷದಲ್ಲಿ ಹೊಸ ಪಕ್ಷ ಸೇರ್ಪಡೆಯಾಗದೆ ವಿಜಯದಶಮಿ ನಂತರ ಅಧಿಕೃತವಾಗಿ ಸೇರ್ಪಡೆಗೆ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಹಳೇ ಮೈಸೂರು ಭಾಗದ ಪ್ರಮುಖ ಒಕ್ಕಲಿಗ ಮುಖಂಡರಾದ ಎಸ್ಪಿಎಂ ಸೇರ್ಪಡೆ ಸಂದರ್ಭದಲ್ಲಿ ಕೇಂದ್ರ ನಾಯಕರು ಉಪಸ್ಥಿತರಿದ್ದು ಸ್ವಾಗತಿಸಲು ಬಯಸಿದ್ದಾರೆ ಎನ್ನಲಾಗಿದೆ.

ಜನಸ್ಪಂದನ’ದಿಂದ ಜೆ.ಸಿ.ಮಾಧುಸ್ವಾಮಿ ಗೈರು: ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ವತಿಯಿಂದ ಶನಿವಾರ ನಡೆದ ‘ಜನಸ್ಪಂದನ’ದಲ್ಲಿ ಹಿರಿಯ ಸಚಿವ ಜೆ.ಸಿ.ಮಾಧುಸ್ವಾಮಿ ಗೈರಾಗಿರುವುದು ಅಚ್ಚರಿ ಮೂಡಿಸಿದೆ. ತುಮಕೂರು ಹಾಗೂ ಮಧುಗಿರಿ ಸಂಘಟನಾ ಜಿಲ್ಲೆಯಿಂದ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರೂ ಜಿಲ್ಲೆಯ ಹಿರಿಯ ನಾಯಕ ಮಾಧುಸ್ವಾಮಿ ಗೈರಾಗಿದ್ದರು. ಚಿಕ್ಕನಾಯಕನಹಳ್ಳಿ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಶನಿವಾರ ಮಾಧುಸ್ವಾಮಿ ಭಾಗವಹಿಸಿದ್ದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಹ ಸಾರ್ವಜನಿಕರಲ್ಲಿ ಮೂಡಿಸಿತು. ಜೆಸಿಎಂ ಹೊರತುಪಡಿಸಿ ಸಚಿವ ಬಿ.ಸಿ.ನಾಗೇಶ್ ಹಾಗೂ ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಭಾಗವಹಿಸಿದ್ದರು.

ಬಿಜೆಪಿಗೆ ಸೇರ್ಪಡೆಯಾಗಲು ಈಗಾಗಲೇ ತೀರ್ಮಾನಿಸಿದ್ದು, ಆತ್ಮೀಯರು, ಹಿತೈಷಿಗಳ ಜತೆ ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇನೆ. ಶುಭ ದಿನ ನೋಡಿಕೊಂಡು ಶೀಘ್ರದಲ್ಲಿಯೇ ಸೇರ್ಪಡೆ ಬಗ್ಗೆ ಬಿಜೆಪಿ ಹಿರಿಯ ಮುಖಂಡರ ಜತೆ ಮಾತನಾಡಿದ್ದೇನೆ.
ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net