ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಇಲ್ಲಿನ ಎಂಸಿಎಸ್ ಸೊಸೈಟಿ ವತಿಯಿಂದ ಕಲ್ಪವೃಕ್ಷ ಸಭಾಭವನದಲ್ಲಿ ನ.14ರಿಂದ 20ರವರೆಗೆ ಸಹಕಾರ ಸಪ್ತಾಹ ಸಂಭ್ರಮ ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ತಿಳಿಸಿದರು.
ಸಂಜೆ 6ಕ್ಕೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸಹಕಾರ ಸಪ್ತಾಹ ಉದ್ಘಾಟಿಸಲಿರುವರು. ಜೈನಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆರ್ಶೀರ್ವಚನ ನೀಡಲಿದ್ದು, ಸೊಸೈಟಿ ಅಧ್ಯಕ್ಷ, ಸಹಕಾರ ರತ್ನ ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್ ಎಂ., ಡಿಆರ್‌ಸಿಎಸ್ ಮಂಗಳೂರು ಡಾ.ಎಚ್.ಎಸ್.ಎನ್.ರಮೇಶ್ ಅತಿಥಿಗಳಾಗಿರುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲ್ಪವೃಕ್ಷ ಪ್ರಶಸ್ತಿ: ಎಂಸಿಎಸ್ ಸೊಸೈಟಿಯಲ್ಲಿ 53 ವರ್ಷ ನಿರ್ದೇಶಕರಾಗಿ, ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಂ.ಗಣೇಶ್ ನಾಯಕ್ ಅವರಿಗೆ ಪ್ರಸಕ್ತ ಸಾಲಿನ ಸಹಕಾರ ಕಲ್ಪವೃಕ್ಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸೊಸೈಟಿಯ ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಎಂ. ಅಭಿನಂದನಾ ಭಾಷಣ ಮಾಡಲಿದ್ದಾರೆ.
15ರಂದು ಶಾಸಕ ಉಮಾನಾಥ ಕೋಟ್ಯಾನ್ ವಿವಿಧ ಯೋಜನೆಗಳನ್ನು ಉದ್ಘಾಟಿಸುವರು. ಸಾರಿಗೆ ಉದ್ಯಮಿ ನಾರಾಯಣ ಪಿ.ಎಂ. ಅವರಿಗೆ ಸಮಗ್ರ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸೊಸೈಟಿ ನಿರ್ದೇಶಕ ಜಯರಾಮ್ ಕೋಟ್ಯಾನ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ರೀಪತಿ ಭಟ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು.
18ರಂದು ಸಹಕಾರ ಮತ್ತು ಕಾನೂನು ವಿಷಯದ ಕುರಿತು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ವಹಿಸಲಿದ್ದಾರೆ. ಎಸ್‌ಎನ್‌ಎಂ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಜೆ.ಜೆ.ಪಿಂಟೋ ಅಧ್ಯಕ್ಷತೆಯಲ್ಲಿ 20ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. 17ರಂದು ಬೆಳಗ್ಗೆ 10ಕ್ಕೆ ಜೈನ್ ಮೆಡಿಕಲ್ ಸೆಂಟರ್ ಆಸ್ಪತ್ರೆ ಮತ್ತು ಡಾಕ್ಟರ್ ಅಸೋಸಿಯೇಷನ್ ವತಿಯಿಂದ ಉಚಿತ ವೈದ್ಯಕೀಯ ತಪಾಸಣೆ ಶಿಬಿರ. ವಿವಿಧ ದೇವಸ್ಥಾನಗಳಿಗೆ, ಶಾಲಾ ಕಾಲೇಜುಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಪ್ರತಿ ದಿನ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸೊಸೈಟಿ ಸಿಇಒ ಚಂದ್ರಶೇಖರ್ ಎಂ. ತಿಳಿಸಿದರು.
ಸೊಸೈಟಿ ಉಪಾಧ್ಯಕ್ಷ ಗಣೇಶ್ ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರಘುವೀರ್ ಕಾಮತ್ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಸುದ್ದಿಗೋಷ್ಠಿಯಲ್ಲಿದ್ದರು.