

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ಜೂ.26 ರಂದು ನಡೆಯುವ ಚುನಾವಣೆಯಲ್ಲಿ ಮತ ದಾನ ಮಾಡಲು ನೀಡಿದ್ದ ನೀಡಲಾಗಿದ್ದ ಗುರುತಿನ ಚೀಟಿ ಕಳೆದುಕೊಂಡಿದ್ದ ಸದಸ್ಯರೊಬ್ಬರು ಶಾಸಕ ಜಿ.ಡಿ. ಹರೀಶ್ ಗೌಡ ಅವರ ಮಧ್ಯಪ್ರವೇಶದಿಂದ ಗುರುತಿನ ಚೀಟಿಯ ನಕಲು ಪ್ರತಿ ಪಡೆಯುವಲ್ಲಿ ಯಶಸ್ವಿಯಾದರು.
ಚಾಮರಾಜನಗರ ತಾಲೂಕು ಕ್ಷೇತ್ರದ ಪುಣಜನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಡೆಲಿಗೇಟ್ ಗುರುನಾಯಕ ಮತದಾರರಾಗಿದ್ದು, ಗುರುತಿನ ಚೀಟಿ ಕಳೆದುಕೊಂಡಿದ್ದರು. ಹಾಗಾಗಿ, ಗುರುತಿನ ಚೀಟಿಯ ನಕಲು ಪ್ರತಿ ನೀಡುವಂತೆ ಜೂ.19 ರಂದು ಎಂಸಿಡಿಸಿ ಬ್ಯಾಂಕ್‌ಗೆ ಮನವಿ ಮಾಡಿದ್ದರು. ಆದರೆ, ಅವರಿಗೆ ಗುರುತಿನ ಚೀಟಿಯ ನಕಲು ಪ್ರತಿ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವ ಕುರಿತು ಚಾಮರಾಜನಗರ ತಾಲೂಕು ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವೃಷಬೇಂದ್ರಪ್ಪ ಎಂಸಿಡಿಸಿಸಿ ಬ್ಯಾಂಕ್‌ಗೆ ಆಗಮಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಜೆ. ಕಾಂತರಾಜ್ ಅವರನ್ನು ಪ್ರಸ್ನಿಸಿದರು.
ಆದರೆ, ವೃಷಬೇಂದ್ರಪ್ಪ ಅವರ ಪ್ರಶ್ನೆಗೆ ಕಾಂತರಾಜ್ ಅವರಿಂದ ಸಮರ್ಪಕ ಉತ್ತರ ದೊರೆಯಲಿಲ್ಲ. ಈ ಬಗ್ಗೆ ನೀವು ಚುನಾವಣಾ ರಿಟರ್ನಿಂಗ್ ಅಧಿಕಾರಿಗಳ ಬಳಿ ಹೋಗಿ ಕೇಳಬಹುದು ಎಮದು ಕಾಂತರಾಜ್ ಹೇಳಿ ಕಳುಹಿಸಿದರು. ಚುನಾವಣಾ ಅಧಿಕಾರಿಗಳಾದ ಉಪ ವಿಭಾಗಾಧಿಕಾರಿ ಆಶಪ್ಪ ಅವರ ಬಳಿ ವಿಚಾರಿಸಿದಾಗ ಬ್ಯಾಂಕ್‌ನಲ್ಲಿ ಒಂದು ಪ್ರತಿ ಇರುವ ಕಾರಣ ಅಲ್ಲಿಯೇ ಪಡೆಯಬಹುದೆಂದು ತಿಳಿಸಿದ್ದರು.
ನಂತರ ಬ್ಯಾಂಕ್‌ಗೆ ಆಗಮಿಸಿ ಗುರುತಿನ ಚೀಟಿ ಕೊಡುವಂತೆ ಕೋರಿದರು. ಆದರೆ, ನಮ್ಮಲ್ಲಿ ಮತದಾರರ ಪಟ್ಟಿ ಇಲ್ಲ ಎಂದು ಗುರುತಿನ ಚೀಟಿ ನಕಲು ಪ್ರತಿ ನೀಡಲು ಸಿಇಒ ಕಾಂತರಾಜ್ ನಿರಾಕರಿಸಿದರು. ಈ ವಿಚಾರ ತಿಳಿದ ಶಾಸಕರೂ ಆದ ಬ್ಯಾಂಕ್ ಮಾಜಿ ಅಧ್ಯಕ್ಷ ಜಿ.ಡಿ. ಹರೀಶ್ ಗೌಡ ಬ್ಯಾಂಕ್‌ಗೆ ಆಗಮಿಸಿ ಸಿಇಒ ಕಾಂತರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಗುರುತಿನ ಚೀಟಿ ಕಳೆದು ಹೋಗಿ ನಕಲು ಪ್ರತಿ ನೀಡುವಂತೆ ಮತದಾರರು ಕೋರಿದಾಗ ನೀಡುವುದು ನಿಮ್ಮ ಕರ್ತವ್ಯ. ನಕಲು ಪ್ರತಿ ನೀಡದೆ ಅವರ ಮತದಾನದ ಹಕ್ಕು ಕಸಿಯಬೇಕು ಎಂಬ ಉದ್ದೇಶ ಹೊಂದಿದ್ದೀರಾ? ನಿಮಗೆ ಏನಾದರೂ ಒತ್ತಡ ಇದೆಯೇ, ಸಂವಿಧಾನದಲ್ಲಿ ಕೊಟ್ಟ ಅವಕಾಶವನ್ನು ಕಸಿದುಕೊಳ್ಳಬಾರದು ಎಂದು ಹರೀಶ್ ಗೌಡ ಸಿಇಒ ಅವರನ್ನು ತರಾಟೆಗೆ ತೆಗೆದುಕೊಂಡರು. ನಂತರ ದಾಖಲೆಗಳನ್ನು ಮತ್ತೊಮ್ಮೆ ಪಡೆದುಕೊಂಡು ಸಿಇಒ ಕಾಂತರಾಜ್, ರಿಟರ್ನಿಂಗ್ ಅಧಿಕಾರಿಗಳ ಅವರಲ್ಲಿದ್ದ ಮತ್ತೊಂದು ಪ್ರತಿಯನ್ನು ಜೆರಾಕ್ಸ್ ಮಾಡಿಸಿಕೊಂಡು ದೃಢೀಕರಣ ನೀಡಿದರು.
ಬಸ್‌ನಲ್ಲಿ ಜೂ.14 ರಂದು ತೆರಳುತ್ತಿದ್ದ ಸಂದರ್ಭ ಗುರುತಿನ ಚೀಟಿ ಕಳೆದು ಹೋಗಿತ್ತು. ಹೀಗಾಗಿ, ಗುರುತಿನ ಚೀಟಿಯ ನಕಲು ಪ್ರತಿ ನೀಡುವಂತೆ ಎಂಸಿಡಿಸಿಸಿ ಬ್ಯಾಂಕ್‌ಗೆ ಜೂ.19 ರಂದು ಮನವಿ ಸಲ್ಲಿಸಿದ್ದೆ. ಆದರೆ, ನಕಲು ಪ್ರತಿ ನೀಡಲು ವಿನಾಕರಣ ಸಿಇಒ ಸತಾಯಿಸಿದರು. ನಮ್ಮನ್ನು ಬ್ಯಾಂಕ್ ಹಾಗೂ ಎಸಿ ಕಚೇರಿ ನಡುವೆ ಅಲೆಯುವಂತೆ ಮಾಡಿದರು. ಶಾಸಕ ಜಿ.ಡಿ.ಹರೀಶ್ ಗೌಡ ಅವರ ಮಧ್ಯಪ್ರವೇಶದಿಂದ ಇದೀಗ ನಕಲು ಪ್ರತಿ ನೀಡಿದ್ದಾರೆ.
ಗುರುನಾಯಕ, ಡೆಲಿಗೇಟ್ಸ್, ಪುಣಜನೂರು
ಚುನಾವಣೆಯಲ್ಲಿ ವಾಮಮಾರ್ಗದಿಂದ ಗೆಲುವು ಸಾಧಿಸಬೇಕು ಎಂಬ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಗುರುತಿನ ಚೀಟಿ ಕಳೆದುಕೊಂಡ ಮತದಾರರಿಗೆ ನಕಲು ಪ್ರತಿ ನೀಡಲು ವಿನಾಕಾರಣ ಸತಾಯಿಸಲಾಯಿತು. ಚುನಾವಣೆ ಮುಕ್ತವಾಗಿ ನಡೆಯದಂತಹ ಸನ್ನಿವೇಶ ನಿರ್ಮಾಣ ಮಾಡಲಾಗಿದ್ದು, ಇದೊಂದು ಸಂವಿಧಾನ ವಿರೋಧಿ ಕೆಲಸವಾಗಿದೆ.
ವೃಷಬೇಂದ್ರಪ್ಪ, ಚಾಮರಾಜನಗರ ತಾಲೂಕು ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ
ಅಧಿಕಾರಗಳನ್ನು ಬಳಸಿಕೊಂಡು ಚುನಾವಣಾ ವ್ಯವಸ್ಥೆ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಯಾವುದೇ ಒತ್ತಡ ಇದ್ದರೂ ಪಾರದರ್ಶಕ ಚುನಾವಣೆ ನಡೆಸಲು ಅಗತ್ಯ ಕ್ರಮಕೈಗೊಳ್ಳಬೇಕು. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಆದರೆ, ಈ ರೀತಿಯ ರಾಜಕೀಯ ಮಾಡಬಾರದು. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶ ಮಾಡಬಾರದು. ನನ್ನನ್ನು ಟಾರ್ಗೆಟ್ ಮಾಡಿರುವುದು ಗೊತ್ತಿಲ್ಲ. ನನ್ನ ಟಾರ್ಗೆಟ್ ಮಾಡಿದ್ದರೆ ಮಾಡಿಕೊಂಡಿರಲಿ, ನನಗೇನೂ ಭಯವಿಲ್ಲ.
ಜಿ.ಡಿ. ಹರೀಶ್ ಗೌಡ, ಶಾಸಕ