ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಗೆ ಮುಹೂರ್ತ ಶೀಘ್ರ

mysore
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಕಳೆದ 69 ವರ್ಷಗಳಿಂದ ರೈತರಿಗೆ ಸಾಲಸೌಲಭ್ಯ ಕಲ್ಪಿಸುವ ಮೂಲಕ ಕೃಷಿಗೆ ಉತ್ತೇಜನ ನೀಡುತ್ತಿರುವ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ)ಗೆ ಶೀಘ್ರದಲ್ಲೇ ಚುನಾವಣೆ ನಿಗದಿಯಾಗುವ ಸಾಧ್ಯತೆ ಇದೆ.


ಬ್ಯಾಂಕ್ ಆಡಳಿತ ಮಂಡಳಿಗೆ 8 ವಾರದೊಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಸಬೇಕಾಗಿದ್ದು, ಈ ಕುರಿತು ಅಧಿಸೂಚನೆ ಹೊರಬೀಳುವ ನಿರೀಕ್ಷೆ ಇದೆ.


2023 ನವೆಂಬರ್ 17ರಂದು ಆಡಳಿತ ಮಂಡಳಿಯ ಅವಧಿ ಮುಕ್ತಾಯಗೊಂಡಿದೆ. ಹೀಗಾಗಿ ಚುನಾವಣೆ ನಡೆಸಲು ದಿನಾಂಕ ನಿಗದಿಪಡಿಸಿದ್ದರೂ ಅದೇ ದಿನ ವಾಪಸ್ ಪಡೆದುಕೊಳ್ಳಲಾಗಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು. ಈ ಬಗ್ಗೆ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, 8 ವಾರದೊಳಗೆ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದೆ. ಇದರಿಂದ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ಈ ಬೆಳವಣಿಗೆಯಿಂದ ಮೈಸೂರು, ಚಾಮರಾಜನಗರ ಜಿಲ್ಲೆಯ ಸಹಕಾರಿ ರಂಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.


ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಚುನಾವಣೆ ದಿನಾಂಕವನ್ನು ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಘೋಷಣೆ ಮಾಡಲಿದ್ದಾರೆ. ಆಡಳಿತ ಮಂಡಳಿಯ 17 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ಕೈಗೊಳ್ಳಲಾಗುತ್ತದೆ. ಮೂವರು ಮಾತ್ರ ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿರುತ್ತಾರೆ. ಈಗಾಗಲೇ ಹೈಕೋರ್ಟ್ ಆದೇಶದ ಪ್ರತಿ ಬ್ಯಾಂಕ್‌ಗೆ ರವಾನೆಯಾಗಿದ್ದು, ಚುನಾವಣಾಧಿಕಾರಿಗೂ ತಲುಪಿದೆ.


ಬ್ಯಾಂಕ್ ವ್ಯಾಪ್ತಿಯ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ 1754 ಮತದಾರರು ಇದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಒಬ್ಬರನ್ನು ಪ್ರತಿನಿಧಿಯಾಗಿ ಕಳುಹಿಸಲಾಗುತ್ತದೆ. ಈ ಪ್ರತಿನಿಧಿ ಮತದಾನದ ಹಕ್ಕನ್ನು ಹೊಂದಿರುತ್ತಾರೆ. ಹೀಗಾಗಿ, ಚುನಾವಣಾ ಪ್ರಕ್ರಿಯೆ ಆರಂಭವಾದ ಮೇಲೆ ಪ್ರತಿನಿಧಿ ನೇಮಕ ಮಾಡಿ ಕಳುಹಿಸಲಾಗುತ್ತದೆ. ತದನಂತರವೇ ಅಂತಿಮ ಮತದಾರರ ಪಟ್ಟಿ ಸಿದ್ಧವಾಗಲಿದೆ.


ಈಗಾಗಲೇ ಚುನಾವಣೆಗೆ ಸದ್ದಿಲ್ಲದೆ ತೆರೆಮರೆಯಲ್ಲಿ ತಯಾರಿಗಳು ನಡೆಯುತ್ತಿದ್ದು, ಆಕಾಂಕ್ಷಿಗಳೂ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ಚುನಾವಣೆ ಕುರಿತು ಅಧಿಸೂಚನೆ ಹೊರಬಿದ್ದ ತಕ್ಷಣ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳಲಿದ್ದು, ಎಲೆಕ್ಷನ್ ರಂಗೇರುವ ನಿರೀಕ್ಷೆ ಇದೆ.


ಸಹಕಾರಿ ಧುರೀಣ, ಶಾಸಕ ಜಿ.ಟಿ.ದೇವೇಗೌಡ ಹಾಗೂ ಎದುರಾಳಿಗಳ ಬಣದ ನಡುವೆ ಈ ಸಲವೂ ಪೈಪೋಟಿ ಏರ್ಪಡಲಿದೆ. 5 ವರ್ಷಗಳ ಹಿಂದೆ ನಡೆದಿದ್ದ ಚುನಾವಣೆಯಲ್ಲಿ ಜಿ.ಡಿ.ಹರೀಶ್‌ಗೌಡ, ಎಂ.ಪಿ.ಸುನೀಲ್, ಆರ್.ನರೇಂದ್ರ, ಸಿ.ಬಸವೇಗೌಡ, ಅಮಿತ್ ವಿ.ದೇವರಹಟ್ಟಿ, ಬಿ.ಎಸ್.ಸದಾನಂದ, ಎಂ.ಕುಮಾರ್, ಸಿ.ಎಸ್.ರವಿ, ಎಚ್.ಬಿ.ಶಿವರಾಜು, ಎಂ.ಬಿ.ಮಂಜೇಗೌಡ, ಕೆ.ಎಸ್.ಕುಮಾರ್, ಎಸ್.ಎಂ.ಕೆಂಪಣ್ಣ, ಕೆ.ಜಿ.ಮಹೇಶ್ ಕುರಹಟ್ಟಿ, ಎಚ್.ಸುಬ್ಬಯ್ಯ, ಎಚ್.ಜೆ.ನಾಗಪ್ರಸಾದ್, ಬಿ.ಜೆ.ನಾಗೇಂದ್ರಕುಮಾರ್, ವೈ.ಎಂ.ಜಯರಾಮ್ ಆಯ್ಕೆಯಾಗಿದ್ದರು. ಈ ಪೈಕಿ ಜಿ.ಟಿ.ದೇವೇಗೌಡರ ಬಣವೇ ಮೇಲುಗೈ ಸಾಧಿಸಿತ್ತು. ಈ ಬಣದ ಅತಿ ಹೆಚ್ಚು ನಿರ್ದೇಶಕರು ಆಯ್ಕೆಯಾಗಿದ್ದರು. ಇದರ ಫಲವಾಗಿ 5 ವರ್ಷಗಳ ಕಾಲ ಜಿ.ಡಿ.ಹರೀಶ್‌ಗೌಡ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದರೊಂದಿಗೆ, ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರಾಗಿಯೂ ನಿಯೋಜನೆಯಾಗಿದ್ದರು.

ಸರ್ಕಾರದ ಹಿಡಿತ


ಹೈಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಜಂಟಿ ನಿಬಂಧಕಿ ಎಂ.ಕೆ.ಆಶಾ ಅವರನ್ನು ಬ್ಯಾಂಕ್‌ನ ಆಡಳಿತಾಧಿಕಾರಿಯಾಗಿ ನಿಯೋಜಿಸಿದೆ. ಅಂತೆಯೆ, ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಆಡಳಿತ ಮಂಡಳಿಯ ಪರವಾಗಿಯೇ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವಿನೋದ್ ಅವರನ್ನು ಬದಲಾವಣೆ ಮಾಡಲಾಗಿದೆ. ಈ ಸ್ಥಾನಕ್ಕೆ ಸಹಕಾರ ಇಲಾಖೆ ಉಪ ನಿಬಂಧಕ ಮಂಜುನಾಥ್ ಅವರನ್ನು ನಿಯೋಜಿಸಲಾಗಿದೆ. ಇದರೊಂದಿಗೆ, ಬ್ಯಾಂಕ್ ಆಡಳಿತ ವ್ಯವಸ್ಥೆಯ ಮೇಲೆ ಸರ್ಕಾರ ನಿಯಂತ್ರಣ ಸಾಧಿಸಿದೆ.

ಯಾರು ಸ್ಪರ್ಧೆಗೆ ಇಳಿಯುತ್ತಾರೆ?


ಜಿ.ಟಿ.ದೇವೇಗೌಡ ಮತ್ತು ಸಿದ್ದರಾಮಯ್ಯ ಬಣದ ನಡುವಿನ ಪೈಪೋಟಿಗೆ ಈ ಚುನಾವಣೆ ಸಾಕ್ಷಿಯಾಗುವುದು ನಿಶ್ಚಿತ. ಕಳೆದ ಸಲ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಸಿ.ಬಸವೇಗೌಡರು ಈ ಬಾರಿ ಸಿದ್ದರಾಮಯ್ಯ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. ಜನತಾ ಬಜಾರ್ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ಕಾಂಗ್ರೆಸ್‌ನಲ್ಲಿದ್ದಾರೆ. ಹನೂರು ಕ್ಷೇತ್ರದ ಮಾಜಿ ಶಾಸಕ ಆರ್.ನರೇಂದ್ರ ಕಾಂಗ್ರೆಸ್‌ನಲ್ಲಿದ್ದರೂ ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮಾತ್ರ ಜಿಟಿಡಿ ಬಣದ ಪರವಾಗಿದ್ದಾರೆ ಎನ್ನಲಾಗುತ್ತಿದೆ. ಆದ್ದರಿಂದ ಚುನಾವಣೆಯ ಹೊತ್ತಿಗೆ ಜಿ.ಟಿ.ದೇವೇಗೌಡರ ಬೆಂಬಲಿತ ಅಭ್ಯರ್ಥಿಗಳ ವಿರುದ್ಧ ಯಾರು ಸ್ಪರ್ಧೆಗೆ ಇಳಿಯಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net