

ಬಾಕ್ಸ್
ಸದಸ್ಯರಿಗೆ ತಲಾ 75 ಲಕ್ಷ ರೂ. ಅನುದಾನ
ಪಾಲಿಕೆ ಸದಸ್ಯರಿಗೆ ತಲಾ 25 ಲಕ್ಷ ರೂ. ಅನುದಾನದಿಂದ ಯಾವುದೇ ಅಭಿವೃದ್ಧಿ ಕಾರ್ಯ ಸಾಧ್ಯವಿಲ್ಲ. ಅದನ್ನು 75 ಲಕ್ಷ ರೂ.ಗಳಿಗೆ ಏರಿಕೆ ಮಾಡಬೇಕು ಎಂದು ಜಗದೀಶ್ ಶೆಟ್ಟಿ ಆಗ್ರಹಿಸಿದರೆ, ನನ್ನ ವಾರ್ಡ್‌ನ ಹಿಂದಿನ ಬಜೆಟ್‌ನ ಕಡತವೇ ಕಳೆದು ಹೋಗಿದೆ ಎಂಬ ಹೇಳಿಕೆ ಅಧಿಕಾರಿಗಳಿಂದ ಬಂದಿದೆ. ಹೀಗೆ ಆದರೆ ನಾವು ಅಭಿವೃದ್ಧಿ ಕೆಲಸ ಮಾಡುವುದು ಹೇಗೆ ಎಂದು ಸಂಶುದ್ದೀನ್ ಗಮನ ಸೆಳೆದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪ್ರತಿ ಸದಸ್ಯರಿಗೂ ತಲಾ 75 ಲಕ್ಷ ರೂ. ಅನುದಾನ ಘೋಷಣೆ ಮಾಡುವುದಾಗಿ ಹೇಳಿದರಲ್ಲದೆ, ಸದಸ್ಯರು ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಿ ತಕ್ಷಣ ಕಳುಹಿಸಬೇಕು. ಮುಂದಿನ ಸಭೆಯೊಳಗೆ ಮಂಜೂರು ಆಗಿ ಸಮಿತಿಗೆ ಬರಬೇಕು ಎಂದು ಹೇಳಿದರು.
ಬಾಕ್ಸ್
ಮೊದಲು ವಾಗ್ಯುದ್ಧ; ಬಳಿಕ ಸಮನ್ವಯ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಕೈಗೊಂಡಿರುವ ಪೂರಕ ಕ್ರಮಗಳಿಂದ ಯಶಸ್ವಿ ಚಂದ್ರಯಾನ-3, ಜಿ-20 ಹಾಗೂ ಮಹಿಳೆಯರಿಗೆ ಮೀಸಲಾತಿ ಯೋಜನೆಗಳಿಗೆ ಶಾಸಕ ಡಿ.ವೇದವ್ಯಾಸ ಕಾಮತ್ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ದೇಶದ ಅಭಿವೃದ್ಧಿಯ ಪಥದಲ್ಲಿ ಪ್ರಥಮ ಪ್ರಧಾನಿ ಅವರಿಂದ ಇಂದಿನ ಪ್ರಧಾನಿ ತನಕ ಯಶೋಗಾಥೆಯನ್ನು ಸಂಕ್ಷಿಪ್ತವಾಗಿ ಮೆಲುಕು ಹಾಕಿದರು. ಎ.ಸಿ.ವಿನಯರಾಜ್ ಮಾತನಾಡಿ, ದೇಶದಲ್ಲಿ ಇಂದು ಕಾಣುವ ಸಾಧನೆ ಏಕಾಏಕಿ ಸಂಭವಿಸಿಲ್ಲ ಎಂದು ಸುದೀರ್ಘ ವಿವರಣೆ ನೀಡಲು ಮುಂದಾದಾಗ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿದರು. ಮತ್ತೆ ಸುಮಾರು ಅರ್ಧ ಗಂಟೆ ಯಾರಿಗೂ ಏನೂ ಅರ್ಥವಾಗದಷ್ಟು ಗದ್ದಲ ಉಂಟಾಯಿತು. ಚರ್ಚೆ ಇತರ ವಿಷಯ ಕಡೆಗೆ ಬದಲಾದಾಗ ಉಭಯ ವಿಭಾಗಗಲ್ಲಿ ಮಧ್ಯಾಹ್ನದ ತನಕ ಸಮನ್ವಯದ ಚರ್ಚೆ ನಡೆಯಿತು.
ಬಾಕ್ಸ್
ಅಣಬೆ ತಯಾರಿಕಾ ಘಟಕ
ತಜ್ಞರ ವರದಿ ಆಧರಿಸಿ ತೀರ್ಮಾನ
ಇರುವೈಲು ವಾರ್ಡ್‌ನ ಮೆಸರ್ಸ್ ವೈಟ್ ಗ್ರೋವ್ ಅಗ್ರಿ ಅಲ್‌ಎಲ್‌ಪಿ ಅಣಬೆ ತಯಾರಿಕಾ ಘಟಕ ಕಾರ್ಯಾಚರಣೆ ಸಂಬಂಧಿಸಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ನೀಡಿರುವ ನಿಯಮಗಳು ಕಾರ್ಯಗತ ಆಗುತ್ತಿರುವ ಬಗ್ಗೆ ಪಾಲಿಕೆಯ ಸ್ಥಳೀಯ ಸದಸ್ಯರು, ಪ್ರತಿಪಕ್ಷ ನಾಯಕರು ಹಾಗೂ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿ ಸರ್ಕಾರೇತರ ಸಂಸ್ಥೆಯ ತಜ್ಞರ ಸಮಿತಿ ರಚಿಸಿ, ಪರಿಶೀಲನೆ ನಡೆಸಬೇಕು. ಸಮಿತಿ ವರದಿ ಆಧಾರದಲ್ಲಿ ಪರಿಷತ್ತಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ತಿಳಿಸಿದರು. ಅಣಬೆ ತಯಾರಿಕಾ ಘಟಕದಿಂದ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತಿದ್ದು, ಅದನ್ನು ಸ್ಥಳಾಂತರಿಸಬೇಕು ಅಥವಾ ಶಾಶ್ವತವಾಗಿ ನಿಲುಗಡೆ ಮಾಡುವಂತೆ ಶಾಸಕ ಡಾ.ಭರತ್ ಶೆಟ್ಟಿ ಮಾಡಿಕೊಂಡ ಮನವಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಚರ್ಚೆಗೆ ಅವಕಾಶ ಒದಗಿಸಿತು. ಈ ವಿಷಯದ ಬಗ್ಗೆ ತಿಂಗಳ ಹಿಂದೆ ಪಾಲಿಕೆಗೆ ಮನವಿ ಮಾಡಿದ್ದೇನೆ. ಇದು ಸ್ಥಳೀಯ ಜನರ ಸಮಸ್ಯೆ. ಈ ವಿಷಯದಲ್ಲಿ ರಾಜಕೀಯವಿಲ್ಲ. ಕಳೆದ ಚುನಾವಣೆಯಲ್ಲಿ ಈ ವಿಷಯವನ್ನು ರಾಜಕೀಯವಾಗಿ ತೆಗೆದುಕೊಳ್ಳುವ ಅವಕಾಶ ಇದ್ದರೂ ಈ ಬಗ್ಗೆ ನಾನು ಮಾತನಾಡಿಲ್ಲ. ಕೆಲವು ದಿನಗಳ ಹಿಂದೆ ಆ ಪರಿಸರಕ್ಕೆ ಭೇಟಿ ನೀಡಿದಾಗ 15 ನಿಮಿಷ ನಿಲ್ಲಲೂ ಆಗಿಲ್ಲ. ಘಟಕದಿಂದ ಹೊರಸೂಸುವ ವಾಸನೆ ಸ್ಥಳೀಯರಿಗೆ ಹಿಂಸೆ ನೀಡುತ್ತಿದೆ. ಆ ಸಂಸ್ಥೆಯನ್ನು ನಿಲುಗಡೆ ಮಾಡಬೇಕೆಂದು ನಾನು ಕೇಳುತ್ತಿಲ್ಲ. ಬದಲಾಗಿ ಈಗಾಗಲೇ ಆ ಸಂಸ್ಥೆ ಕಾರ್ಯಾಚರಣೆ ಆರಂಭಿಸಲು ಜಿಲ್ಲಾಧಿಕಾರಿ ನೀಡಿರುವ ನಿಯಮಗಳು ಪಾಲನೆಯಾಗುತ್ತಿವೆಯೇ ಎಂಬ ಬಗ್ಗೆ ಮರು ಪರಿಶೀಲನೆ ಆಗಬೇಕಾಗಿದೆ ಎಂದು ಶಾಸಕರು ತಿಳಿಸಿದರು. ಸ್ಥಳೀಯ ಸದಸ್ಯೆ ಹೇಮಲತಾ ಸಾಲ್ಯಾನ್, ಪ್ರತಿಪಕ್ಷದ ಪ್ರವೀಣ್‌ಚಂದ್ರ ಆಳ್ವ, ಶಶಿಧರ ಹೆಗ್ಡೆ, ವಿನಯರಾಜ್ ಮುಂತಾದವರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು.
ಸಾವರ್ಕರ್ ನಾಮಕರಣ ಪ್ರಸ್ತಾವಕ್ಕೆ ವಿರೋಧ
ಸುರತ್ಕಲ್ ಜಂಕ್ಷನ್ ವೃತ್ತಕ್ಕೆ ಸಾರ್ವಕರ್ ವೃತ್ತ ನಾಮಕರಣ ಮಾಡುವ ಕುರಿತಂತೆ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರ ಅನುಮೋದನೆ ಹಾಗೂ ಪ್ರತಿಪಕ್ಷ ಸದಸ್ಯರ ಆಕ್ಷೇಪದೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಸಾವರ್ಕರ್ ವೃತ್ತ ನಾಮಕರಣಕ್ಕೆ 14 ಆಕ್ಷೇಪಗಳು ಬಂದಿದ್ದು, ಸ್ಥಳೀಯ ಸಾಧಕರಾದ ಸುಬ್ಬಯ್ಯ ಶೆಟ್ಟಿ ಅಥವಾ ಶ್ರೀನಿವಾಸ ಮಲ್ಯ ಹೆಸರನ್ನು ನಾಮಕರಣ ಮಾಡುವಂತೆ ಪ್ರತಿಪಕ್ಷ ಸದಸ್ಯರು ಆಗ್ರಹಿಸಿದರು.
ಊಟಕ್ಕೆ ವಿರಾಮವಿಲ್ಲ
ಸಾಮಾನ್ಯವಾಗಿ ಬೆಳಗ್ಗೆ 11ಕ್ಕೆ ಆರಂಭವಾಗುವ ಸಭೆ 1.30ರಿಂದ 2 ಗಂಟೆಯ ವೇಳೆಗೆ ಕೊನೆಗೊಳ್ಳುತ್ತದೆ. ಆದರೆ ಈ ಸಲದ ಸಭೆ ಊಟದ ವಿರಾಮವೂ ಇಲ್ಲದೆ ಸಾಯಂಕಾಲ 4.15ರ ತನಕ ನಡೆಯಿತು.