ಸ್ಟೇಟ್‌ಬ್ಯಾಂಕ್ ಪರಿಸರಕ್ಕೆ ಮನಪಾ ಆಯುಕ್ತರ ಭೇಟಿ, ಪರಿಶೀಲನೆ

ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ ಸಂಡೆ ಬಜಾರ್ ವ್ಯಾಪಾರ ಸ್ಥಳ ಹಾಗೂ ಬೀದಿ ಬದಿ ವ್ಯಾಪಾರ ವಲಯಕ್ಕೆ ಭೇಟಿ ನೀಡಿ, ಬೀದಿ ಬದಿ ವ್ಯಾಪಾರಿಗಳ ಅಹವಾಲು ಆಲಿಸಿದರು.
ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ ಸಂಡೆ ಬಜಾರ್ ವ್ಯಾಪಾರ ಸ್ಥಳ ಹಾಗೂ ಬೀದಿ ಬದಿ ವ್ಯಾಪಾರ ವಲಯಕ್ಕೆ ಭೇಟಿ ನೀಡಿ, ಬೀದಿ ಬದಿ ವ್ಯಾಪಾರಿಗಳ ಅಹವಾಲು ಆಲಿಸಿದರು.
Published on
ಮಂಗಳೂರು: ಮುಂದಿನ ಒಂದು ವಾರ ಯಾರು ಕೂಡಾ ಬೀದಿ ಬದಿ ವ್ಯಾಪಾರ ನಡೆಸಬಾರದು. ಆ ಬಳಿಕ ಕಾನೂನು ಪ್ರಕಾರ ಏನು ಅವಕಾಶವಿದೆ ಅದನ್ನು ಒದಗಿಸಲಾಗುವುದು. ಅಧಿಕಾರಿಗಳ ಜತೆಗೆ ಸಂಯಮದಿಂದ ವರ್ತಿಸಬೇಕು ಮಹಾನಗರ ಪಾಲಿಕೆಯ ನೂತನ ಆಯುಕ್ತ ರಾಹುಲ್ ರತ್ನಂ ಪಾಂಡೆ ಹೇಳಿದರು.
ಪುರಭವನದ ಎದುರು ನಡೆಯುವ ಸಂಡೆ ಬಜಾರ್ ವ್ಯಾಪಾರ ಸ್ಥಳ ಹಾಗೂ ಬೀದಿ ಬದಿ ವ್ಯಾಪಾರ ವಲಯಕ್ಕೆ ಗುರುವಾರ ಭೇಟಿ ನೀಡಿ ವ್ಯಾಪಾರಿಗಳ ಸಮಸ್ಯೆ ಆಲಿಸಿದ ಬಳಿಕ ಮಾತನಾಡಿದರು.
ಎಲ್ಲಾ ಬೀದಿ ಬದಿ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನವಾರ ಸಭೆ ನಡೆಸಿ ಅಲ್ಲಿ ಬರುವ ಅಂತಿಮ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಬೀದಿ ಬದಿ ವ್ಯಾಪಾರಕ್ಕೆ ಸರ್ಕಾರದ ನಿಯಮಗಳೇನಿದೆ ಎನ್ನುವುದನ್ನು ಪರಿಶೀಲನೆ ನಡೆಸಿ ಯಾವ ರೀತಿ ಅವಕಾಶ ನೀಡಲು ಸಾಧ್ಯವಿದೆ ಆ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದರು.
ಕಳೆದ 2 ತಿಂಗಳಿನಿಂದ ಪಾಲಿಕೆ ಅಧಿಕಾರಿಗಳು ಸಂಡೇ ಬಜಾರ್ ನಲ್ಲಿ ತೆರವು ಕಾರ್ಯಾಚರಣೆ ನಡೆಸುವ ಜತೆಗೆ ವ್ಯಾಪಾರಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕನಿಷ್ಟ 40 ಮಂದಿಗೆ ಸಂಡೇ ವ್ಯಾಪಾರಕ್ಕೆ ಪಾಲಿಕೆ ವತಿಯಿಂದ ಅವಕಾಶ ನೀಡಬೇಕು ಎಂದು ಆಯುಕ್ತರನ್ನು ವ್ಯಾಪಾರಿಗಳು ಆಗ್ರಹಿಸಿದರು. ಯಾವುದೇ ವ್ಯಾಪಾರಿಯೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಅವರೊಂದಿಗೆ ಸಂಯಮದಿಂದ ವರ್ತಿಸಬೇಕು. ಅಧಿಕಾರಿಗಳಿಂದ ತಪ್ಪಾಗಿದ್ದರೆ ನನ್ನ ಗಮನಕ್ಕೆ ತರಬೇಕು ಎಂದರು. ಬೀದಿ ವ್ಯಾಪಾರ ವಲಯವಲ್ಲದ ಕಾರಣ ಸಂಡೇ ವ್ಯಾಪಾರವನ್ನು ಕಳೆದ 2 ತಿಂಗಳಿನಿಂದ ಪಾಲಿಕೆ ಅಧಿಕಾರಿಗಳು ತೆರವು ಮಾಡಿದ್ದಾರೆ. ಪಾಲಿಕೆ ವತಿಯಿಂದ ಸೀಮಿತ ಜಾಗದಲ್ಲಿ 40 ಲೈಸನ್ಸ್ ನೀಡಲಾಗುವುದು. ಯಾವ ವಾರ ಯಾರು ವ್ಯಾಪಾರ ಮಾಡಬೇಕು ಎಂದು ಸಂಘದಲ್ಲೇ ನಿರ್ಧಾರವಾಗಬೇಕು. ಸ್ಥಳೀಯರಿಗೆ ಆದ್ಯತೆಯ ಮೇರೆಗೆ ಅವಕಾಶ ಒದಗಿಸಬೇಕು. ಆ ಬಳಿಕ ಯಾರೂ ಕೂಡ ನನ್ನಲ್ಲಿ ಬಂದು ಜಗಳವಾಡಬಾರದು ಎಂದರು.
ನಗರದಲ್ಲಿ ಬೀದಿ ವ್ಯಾಪಾರಿಗಳ ಎರಡು ಸಂಘಗಳಿದ್ದು, ಅವುಗಳನ್ನು ಒಂದೇ ಸಂಘ ಮಾಡುವಂತೆ ಆಯುಕ್ತರು ಸೂಚನೆ ನೀಡಿದರು. ಅದಕ್ಕೆ ವ್ಯಾಪಾರಿಗಳು ಸಮ್ಮತಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಂವಹನಕ್ಕೆ ಸಹಕಾರಿಯಾಗಲಿದೆ. ಒಂದೇ ಸಂಘವಿದ್ದರೆ ಗೊಂದಲಗಳನ್ನು ನಿವಾರಿಸಬಹುದು. ಹಲವು ಸಂಘಗಳಿದ್ದರೆ ಮತ್ತೆ ಸಮಸ್ಯೆ ಉಂಟಾಗುತ್ತದೆ ಎಂದರು.
ವ್ಯಾಪಾರಕ್ಕೆ ಯೋಗ್ಯ ವಲಯ ನಿರ್ಮಾಣ
ಪಾಲಿಕೆಯಿಂದ ಬೀದಿ ವ್ಯಾಪಾರಿಗಳಿಗೆ ನಿರ್ಮಿಸಲಾಗಿರುವ ವಲಯಕ್ಕೆ ಭೇಟಿ ನೀಡಿದ ಆಯುಕ್ತರು ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ವಲಯದಲ್ಲಿ ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆ, ವ್ಯಾಪಾರಿಗಳು ಹೊಂದಿರುವ ಐಡಿ ಕಾರ್ಡ್ ಪರಿಶೀಲನೆ ನಡೆಸಿದರು. ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಪಾಲಿಕೆ ನಿರ್ಮಿಸಿದ ವಲಯ ಸರಿಯಾಗಿ ಬಳಕೆಯಾಗುತ್ತಿಲ್ಲ. ಅದನ್ನು ಯಾವ ರೀತಿಯಲ್ಲಿ ಬಳಕೆಗೆ ಯೋಗ್ಯ ಮಾಡಬಹುದು ಎನ್ನುವ ಸಲಹೆಗಳನ್ನು ಬೀದಿ ವ್ಯಾಪಾರಿಗಳಿಂದ ಪಡೆಯಲಾಗಿದೆ. ಈ ಬಗ್ಗೆ ಸಭೆ ನಡೆಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net