ಎಂ.ಸಿ.ಸಿ. ಬ್ಯಾಂಕ್ 13.12 ಕೋ.ರೂ. ಲಾಭ ಕಾವೂರು, ಬೆಳ್ತಂಗಡಿ, ಶಿವಮೊಗ್ಗದಲ್ಲಿ ಹೊಸ ಶಾಖೆಗಳು ಶೀಘ್ರ

mng-5 April Anil lobo
Published on

ಮಂಗಳೂರು: ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 112 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಂ.ಸಿ.ಸಿ ಬ್ಯಾಂಕ್ ಲಿಮಿಟೆಡ್ ಮಾ.31ಕ್ಕೆ ಅಂತ್ಯಗೊಂಡ ವಿತ್ತೀಯ ವರ್ಷದಲ್ಲಿ ಲೆಕ್ಕ ಪರಿಶೋಧನಾ ಪೂರ್ವ 13.12 ಕೋಟಿ ರೂ. ವ್ಯವಹಾರಿಕ ಲಾಭಗಳಿಸಿದೆ.


ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆ ಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರಥಮ ಬಾರಿಗೆ ಶೇ.1.07 ಎನ್.ಪಿ.ಎ. ದಾಖಲಿಸಿದೆ. ಬ್ಯಾಂಕಿನ ವ್ಯವಹಾರವು ಡಿಸೆಂಬರ್ ಅಂತ್ಯಕ್ಕೆ 1000 ಕೋಟಿ ರೂ. ತಲುಪಿದ್ದು, ಈ ಆರ್ಥಿಕ ವರ್ಷದ ಇನ್ನೊಂದು ಮಹತ್ವದ ಸಾಧನೆಯಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಬ್ಯಾಂಕ್ ಸ್ಥಾಪನೆಯಾದಂದಿನಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯ ಕ್ಷೇತ್ರವನ್ನು ಆಡಳಿತ ಮಂಡಳಿ, ಅಧಿಕಾರಿ ವರ್ಗ ಮತ್ತು ಸಿಬ್ಬಂದಿಯ ಶ್ರಮದಿಂದ,ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಹೀಗೆ 5 ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಪ್ರಸ್ತುತ ವರ್ಷ ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ರಾಜ್ಯಕ್ಕೆ ವಿಸ್ತರಿಸಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅನುಮತಿ ದೊರಕಿದ್ದು, ಇದೊಂದು ಮಹತ್ವದ ಸಾಧನೆಯಾಗಿದೆ ಎಂದರು.


ಬ್ರಹ್ಮಾವರದಲ್ಲಿ ಬ್ಯಾಂಕಿನ 17ನೇ ಶಾಖೆಯನ್ನು ತೆರೆದಿದ್ದು, ಕಾವೂರು, ಬೆಳ್ತಂಗಡಿ ಮತ್ತು ಶಿವಮೊಗ್ಗದಲ್ಲಿ ಶೀಘ್ರದಲ್ಲೇ ಶಾಖೆಗಳನ್ನು ತೆರೆಯಲಾಗುವುದು. ಅನಿವಾಸಿ ಭಾರತೀಯರರಿಗೆ (ಎನ್‌ಆರ್‌ಐ) ಸೇವಾ ಸೌಲಭ್ಯವನ್ನು ನೀಡುವ ಕರ್ನಾಟಕದ ಪಟ್ಟಣ ಸಹಕಾರಿ ಬ್ಯಾಂಕುಗಳ ಪೈಕಿ ಎರಡನೇ ಬ್ಯಾಂಕ್ ಇದಾಗಿದೆ.


ಪ್ರಸ್ತುತ ಆರ್ಥಿಕ ವರ್ಷದಲ್ಲಿ ಅನಿಲ್ ಲೋಬೊ ನೇತೃತ್ವದ 14 ಸದಸ್ಯರು 2023-28 ವರ್ಷಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದು, 2023 ಆಗಸ್ಟ್‌ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅನಿಲ್ ಲೋಬೊ ಅವರು ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಬ್ಯಾಂಕಿನ ಸದಸ್ಯರು ಬ್ಯಾಂಕಿನ ಮೇಲೆ ಹೊಂದಿರುವ ವಿಶ್ವಾಸವೇ ಇದಕ್ಕೆ ಕಾರಣವಾಗಿದೆ.


2023-24 ವಿತ್ತೀಯ ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಬ್ಯಾಂಕಿನ ವ್ಯವಹಾರ ಪ್ರಗತಿಯನ್ನು ದಾಖಲಿಸಿದ್ದು, ಬ್ಯಾಂಕಿನ ನಿವ್ವಳ ಮೌಲ್ಯ 62.45 ಕೋಟಿ ರೂ. ನಿಂದ 76.35 ಕೋಟಿ ರೂ.ಗೆ ತಲುಪಿದೆ. ಬ್ಯಾಂಕಿನ ವ್ಯವಹಾರ 1081 ಕೋಟಿ ರೂ. ದಾಟಿದ್ದು ಕಳೆದ ವರ್ಷಕ್ಕಿಂತ ಶೇ. 16 ಏರಿಕೆಯಾಗಿದೆ ಎಂದವರು ಹೇಳಿದರು.


ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ - ಆಂಡ್ರೂೃ ಡಿಸೊಜ, ಡಾ. ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೊಜ, ಎಲ್ರೊಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೆರೊ, ರೋಶನ್ ಡಿಸೊಜ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೊಜ, ಆಲ್ವಿನ್ ಪಿ. ಮೊಂತೆರೊ, ಫೆಲಿಕ್ಸ್ ಡಿ ಕ್ರೂಜ್, ಶರ್ಮಿಳಾ ಮಿನೇಜಸ್ ಹಾಗೂ ಮಹಾ ಪ್ರಬಂದಕ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net