ಭೀಮನ ಅಮಾವಾಸ್ಯೆಗೆ ಮ. ಬೆಟ್ಟ ಸಜ್ಜು

02 HANUR 1 B
Published on


ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ಭೀಮನ ಅಮಾವಾಸ್ಯೆ (ಆ. 4)ಹಾಗೂ ಕುಂಭಾಭಿಷೇಕ (ಆ. 5) ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಕಲ ರೀತಿಯ ಸಿದ್ಧತೆ ನಡೆಸಿದೆ.
ಪ್ರತಿ ವರ್ಷ ಭೀಮನ ಅಮಾವಾಸ್ಯೆಯಂದು ಮ.ಬೆಟ್ಟಕ್ಕೆ ಚಾ.ನಗರ ಸೇರಿದಂತೆ ಬೆಂಗಳೂರು, ಮೈಸೂರು, ರಾಮನಗರ, ಚನ್ನಪಟ್ಟಣ, ಕನಕಪುರ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹಾಗಾಗಿ ಎಲ್ಲ ಭಕ್ತರಿಗೂ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಾಳಜಿ ವಹಿಸಲಾಗಿದೆ.
ಪ್ರಾಧಿಕಾರದ ಕಾರ್ಯದರ್ಶಿ ಎ.ಇ ರಘು ಈ ನಿಟ್ಟಿನಲ್ಲಿ ಪೂರ್ವ ಸಿದ್ಧತೆಗಳಿಗೆ ಹೆಚ್ಚಿನ ಮುತುರ್ವಜಿ ವಹಿಸಿದ್ದಾರೆ. ಕಳೆದ 2 ದಿನಗಳ ಹಿಂದೆ ಅಧಿಕಾರಿಗಳು ಹಾಗೂ ನೌಕರರ ಸಭೆ ನಡೆಸಿ, ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದಾರೆ. ಭಕ್ತರಿಗೆ ಉತ್ತಮ ಸೇವೆ ಒದಗಿಸಲು ಪ್ರತಿಯೊಬ್ಬರೂ ಹೆಚ್ಚಿನ ಒತ್ತು ನೀಡಬೇಕು ಎಂದು ಸೂಚಿಸಿದ್ದಾರೆ. ಮಹಾಶಿವರಾತ್ರಿ ಹಾಗೂ ಯುಗಾದಿ ಜಾತ್ರೆಗಳನ್ನಜು ಯಶ ಗೊಳಿಸಿದಂತೆ ಭೀಮನ ಅಮಾವಾಸ್ಯೆ ಕಾರ್ಯಕ್ರಮವನ್ನೂ ಸೂಕ್ತವಾಗಿ ನಿರ್ವಹಿಸಿ ಭಕ್ತಜನ ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದು ಅವರು ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಹಾಗಾಗಿ ಅಧಿಕಾರಿಗಳು ಹಾಗೂ ನೌಕರರು ಜತೆಗೂಡಿ ಭರದ ಸಿದ್ಧತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಭಕ್ತರಿಗೆ ಅಗತ್ಯ ಸೌಕರ್ಯ: ಆ. 4ರಂದು ಭೀಮನ ಅಮಾವಾಸ್ಯೆ ಒಂದೆಡೆಯಾದರೆ ವಾರಾಂತ್ಯದ ರಜಾ ದಿನವೂ ಆಗಿದೆ. ಮ.ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಅಂದು ಹೆಚ್ಚಿರುತ್ತದೆ. ಹಾಗಾಗಿ ಆಗಮಿಸುವ ಭಕ್ತರಿಗೆ ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಟ್ಟದಲ್ಲಿ ಆಗಾಗ್ಗೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ತೊಂದರೆಯಾಗದಂತೆ ವಾಟರ್ ಪ್ರೂಫ್ ಶಾಮಿಯಾನಗಳನ್ನು ಅಳವಡಿಸಲಾಗಿದೆ. ದೇವರ ದರ್ಶನ ಪಡೆಯಲು ಭಕ್ತರು ತೆರಳುವ ಸರತಿ ಸಾಲಿನಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ನೂಕುನುಗ್ಗಲು ಉಂಟಾಗದಂತೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಅಂಗ ವಿಕಲರು ಹಾಗೂ ವೃದ್ಧರಿಗೆ ದರ್ಶನಕ್ಕೆ ನೆರವಾಗುವ ನಿಟ್ಟಿನಲ್ಲಿ ರಾಜಗೋಪುರದ ಬಳಿ ವಿಶೇಷ ಕೌಂಟರ್ ತೆರೆಯಲಾಗಿದೆ.
ನೈರ್ಮಲ್ಯ ಪಾಲನೆ ಹಿನ್ನೆಲೆಯಲ್ಲಿ ದೇಗುಲದ ಆವರಣದ ಶೌಚಗೃಹಗಳನ್ನು ಸ್ವಚ್ಛಗೊಳಿಸಲಾಗಿದೆ. ಮ.ಬೆಟ್ಟದ ಮಾಸ್ಟರ್ ಪ್ಲಾನ್ ಆವರಣದಲ್ಲಿ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಈ ಕಾರ್ಯಕ್ಕೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ.
ವಿಶೇಷ ದಾಸೋಹ ವ್ಯವಸ್ಥೆ: ಭಕ್ತರ ಸಂಖ್ಯೆ ಅಮಾವಾಸ್ಯೆಯಂದು ಹೆಚ್ಚಾಗುವ ನಿರೀಕ್ಷೆ ಇದ್ದು, ದಾಸೋಹ ಭವನದಲ್ಲಿ ಪ್ರಸಾದ ವಿತರಿಸುವುದು ಕಷ್ಟ ಸಾಧ್ಯವಾಗಲಿದೆ. ಹಾಗಾಗಿ ದಾಸೋಹ ಭವನದ ಸಮೀಪದಲ್ಲಿ ವಾಟರ್ ಪ್ರೂಪ್ ಶಾಮಿಯಾನದ ವ್ಯವಸ್ಥೆ ಮಾಡಿ ದಾಸೋಹ ವಿತರಣೆಗೆ ಕ್ರಮ ವಹಿಸಲಾಗಿದೆ. ಈಗಾಗಲೇ ಬಾಣಿಸಿಗರಿಂದ ಅಡುಗೆ ತಯಾರಿ ಹಾಗೂ ನಿರಂತರ ಪ್ರಸಾದ ವಿತರಿಸುವ ಕಾರ್ಯ ಆರಂಭವಾಗಿದೆ. ಜತೆಗೆ ಪ್ರಸಾದ ವ್ಯವಸ್ಥೆಯಲ್ಲಿ ವಿಶೇಷ ಖಾದ್ಯ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈವರೆಗೂ ವಿಶೇಷ ದಾಸೋಹದಲ್ಲಿ ಭಕ್ತರು ಪ್ರಸಾದವನ್ನು ನೆಲದ ಮೇಲೆ ಕುಳಿತು ಸ್ವೀಕರಿಸಬೇಕಿತ್ತು. ಇದರಿಂದ ಕೆಲವರು ತೊಂದರೆ ಅನುಭವಿಸಬೇಕಿತ್ತು. ಇದನ್ನು ಮನಗಂಡ ಕಾರ್ಯದರ್ಶಿ ರಘು ಈ ಬಾರಿ ಆಸನದ ವ್ಯವಸ್ಥೆ ಕಲ್ಪಿಸಿದ್ದಾರೆ.
ಹೆಚ್ಚುವರಿ ಬಸ್: ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇಗುಲದ ಪರಿಸರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್‌ಗೆ ಕ್ರಮ ವಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net