

ಕಾರವಾರ: ಗೋವಾ ಕಾಣಕೋಣ ಸಮೀಪ ಮಾಂಶೆಂನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಕಾರವಾರ ಸರ್ಕಾರಿ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ, ಬೆಳಗಾವಿ ಜಿಲ್ಲೆಯ ಗೋಕಾಕದ ಆದರ್ಶ ಪೂಜಾರಿ(23) ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಆದರ್ಶ ಅವರ ಸಹಪಾಠಿ ಬೆಳಗಾವಿ ಮೂಲದ ರೌನಕ್ ಚೌಹಾಣ್ (23) ಬೈಕ್ ಚಲಾಯಿಸುತ್ತಿದ್ದರು. ಆತನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರವಾರ
ಕ್ರಿಮ್ಸ್ಗೆ ಸೇರಿಸಲಾಗಿದೆ. ಇಬ್ಬರೂ ಬೈಕ್ನಲ್ಲಿ ಗೋವಾಕ್ಕೆ ಊಟಕ್ಕೆ ತೆರಳಿದ್ದರು. ರಾತ್ರಿ ವಾಪಸ್ ಬರುವಾಗ ಎಮ್ಮೆ ಅಡ್ಡ ಬಂದು ಬಿದ್ದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಕಾಣಕೋಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿತ್ತು. ಆದರೆ, ಹಿಂಬದಿ ಸವಾರ ಆದರ್ಶ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಾಣಕೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.