

ಉಡುಪಿ: ಎಂಬಿಎ ವಿದ್ಯಾರ್ಥಿನಿ ಅನಿಷಾ (26) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರಿಸಿಕೊಂಡಿದ್ದ ಆಕೆಯ ಪ್ರಿಯಕರ, ಆರೋಪಿ ಚೇತನ್ ಶೆಟ್ಟಿಯನ್ನು ಬ್ರಹ್ಮಾವರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಆಗಸ್ಟ್.21 ರಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆರೋಪಿ ಚೇತನ್ ತಲೆಮರಿಸಿಕೊಂಡಿದ್ದ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುವತಿ ಮನೆಯವರಯ ಯುವಕನ ವಿರುದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಬಗ್ಗೆ ದೂರು ದಾಖಲಿಸಿದ್ದರು. ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಪತ್ತೆ ವಿಭಾಗದ ತಂಡ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪರಾರಿಯಾಗಿ ಮೈಸೂರು, ನಂಜನಗೂಡು ಸೇರಿದಂತೆ ಐದಾರು ಕಡೆಗಳಲ್ಲಿ ಪೊಲೀಸರ ಕಣ್ತಪ್ಪಿಸಿ ತಿರುಗಾಡುತ್ತಿದ್ದ ಬುಧವಾರ ಸಾಯಂಕಾಲ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು ಬೆಂಗಳೂರು, ವಿಜಯನಗರ, ಚಂದ್ರಲೆಔಟ್‌ನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಗುರುವಾರ ಬ್ರಹ್ಮಾವರ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಆರೋಪಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ಸೆ.16ವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಲಯ ಆದೇಶಿಸಿದೆ.
ಪ್ರೀತಿಯ ಹೆಸರಲ್ಲಿ ಚೇತನ್ ಶೆಟ್ಟಿ ಮೋಸ ಮಾಡಿದ ಬಗ್ಗೆ ಬೇಸತ್ತು ಅನಿಷಾ ಆಗಸ್ಟ್.21 ರಂದು ಯುವಕನ ಮನೆಯ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರೋಪಿ ಚೇತನ್ ಮನೆ ಸಮೀಪ ಅನಿಷಾಳ ಮನೆಯಿದ್ದು, ಕೆಲವು ವರ್ಷಗಳ ಹಿಂದೆ ಚೇತನ್ ಪ್ರೇಮ ನಿವೇದನೆ ಮಾಡಿದ್ದ. ಕೆಲವು ವರ್ಷ ಪ್ರೀತಿಯ ನಾಟಕವಾಡಿ ಇದೀಗ ಬೇರೊಂದು ಹುಡುಗಿ ಜತೆ ಮದುವೆಗೆ ತಯಾರಿ ನಡೆಸಿದ್ದ ಎಂದು ಯುವತಿ 4 ಪುಟಗಳ ಡೆತ್‌ನೋಟ್ ಬರೆದು ಆತ್ಮಹತ್ಯೆ ಶರಣಾಗಿದ್ದರು. ಇನ್ನೊಬ್ಬ ಯುವತಿ ಈ ರೀತಿಯ ಮೋಸದಾಟಕ್ಕೆ ಬಲಿಯಾಗಬಾರದು ಅದಕ್ಕಾಗಿ ನಾನು ಪ್ರಾಣ ತ್ಯಾಗ ಮಾಡುತಿದ್ದೇನೆ ಎಂದು ಅನಿಷಾ ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದರು.