

ಬೈಲಹೊಂಗಲ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ನೂತನ ಸಭಾಭವನ ಕಟ್ಟಡ ಮತ್ತು ಐದು ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ 4 ಕೋಟಿ ರೂ. ಬಿಡುಗಡೆ ಮಾಡಿದೆ. ಮುಂಬರುವ ದಿನಗಳಲ್ಲಿ ಎಂಬಿಎ, ಎಂಎ, ಎಂ.ಕಾಂ, ಬಿಎಸ್ಸಿ. ಕೋರ್ಸ್ ಆರಂಭಿಸಲಾಗುವುದು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ವಿವಿಧ ಚಟುವಟಿಕೆ ಉದ್ಘಾಟನೆ, ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಶಿಕ್ಷಣವೇ ಸಮಾಜದ ನೈಜ ಬೆಳವಣಿಗೆ. ನಿರಂತರ ಅಧ್ಯಯನ ಹಾಗೂ ಶಿಕ್ಷಕರ ಮಾರ್ಗದರ್ಶನ ಪಡೆದು ವಿದ್ಯಾರ್ಥಿನಿಯರು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸುವ ಮೂಲಕ ಕಾಲೇಜು ಮತ್ತು ಹೆತ್ತವರಿಗೆ ಕೀರ್ತಿ ತರಬೇಕು. ಸರ್ಕಾರಿ ಪಪೂ ಕಾಲೇಜಿನಲ್ಲಿ 2,600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಸಾಪ ತಾಲೂಕು ಮಾಜಿ ಅಧ್ಯಕ್ಷ ಈಶ್ವರ ಹೋಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್ ಅಕ್ತರ ಮಾತನಾಡಿ, ವಿದ್ಯಾರ್ಥಿನಿಯರು ಸೌಲಭ್ಯ ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ರಾಘವೇಂದ್ರ ಹುಲಕುಂದ, ಬಸವರಾಜ ವಾಲಿ ಮಾತನಾಡಿದರು.ಮಾತನಾಡಿದರು. ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಸನ ಗೊರವನಕೊಳ್ಳ, ಆನಂದ ವಾಲಿ, ಸುನೀಲ ದೇಶನೂರ, ಸಂಗಪ್ಪ ಕಾದ್ರೊಳ್ಳಿ, ಶಿವು ಹಂಪನ್ನವರ, ಜಯಶ್ರೀ ಮತ್ತಿಕೊಪ್ಪ, ಸುಶೀಲ ಲಕ್ಕನಗೌಡ್ರ, ಅನ್ನಪೂರ್ಣ ಹಿರೇಮಠ ಇತರರಿದ್ದರು. ಪ್ರೊ.ಶಿವಲೀಲಾ ಮುಕುಂದ, ಹೇಮಲತಾ ತೋರಗಲ ಪರಿಚಯಿಸಿದರು.