

ಬೆಂಗಳೂರು: ಸಚಿವ ರಾಮಲಿಂಗಾ ರೆಡ್ಡಿಯವರ ಹೆಸರು ಬಳಸಿಕೊಂಡು ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಾನು ಸಚಿವರ ಆಪ್ತನಾಗಿದ್ದು ಮುಜರಾಯಿ ಇಲಾಖೆಯಲ್ಲಿ ವರ್ಗಾವಣೆ ಮಾಡಿಸಿಕೊಡುತ್ತೇನೆ ಎಂದು ಸಾಕಷ್ಟು ಜನರಿಗೆ ವಂಚಿಸಿದ್ದ ಮೈಸೂರು ಮೂಲದ ರಘು ಎಂಬಾತನನ್ನ ಬಂಧಿಸಲಾಗಿದೆ.
ಎಂಬಿಎ ವ್ಯಾಸಾಂಗ ಮಾಡಿದ್ದ ಆರೋಪಿ, ಸುಲಲಿತವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ. ಪದವೀಧರನಾದ ಈತ ನ್ಯಾಯವಾದ ಕೆಲಸ ಮಾಡುವುದನ್ನು ಬಿಟ್ಟು ಸುಲಭವಾಗಿ ಹಣ ಮಾಡಲು ಪ್ಲ್ಯಾನ್ ಮಾಡಿದ್ದ. ಈ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಹೆಸರಲ್ಲಿಯೂ ಒಮ್ಮೆ ವಂಚಿಸಿ ಬಂಧನವಾಗಿದ್ದ. ಬಿಡುಗಡೆಯಾದ ಬಳಿಕ ಇದೀಗ ಸಚಿವ ರಾಮಲಿಂಗಾರೆಡ್ಡಿಗೆ ತಾನು ಆಪ್ತ, ಮುಜರಾಯಿ ಇಲಾಖೆಯಲ್ಲಿ ವರ್ಗಾವಣೆ ಮಾಡಿಸಿಕೊಡುವುದಾಗಿ ಕೆಲ ಅಧಿಕಾರಿಗಳಿಗೆ ಕರೆ ಮಾಡಿದ್ದ. ವರ್ಗಾವಣೆ ಮಾಡಿಸಿಕೊಡುವುದಾಗಿ ಪೋನ್ ಪೇ, ಗೂಗಲ್ ಪೇ ಮೂಲಕ ಹಣ ಪಡೆದು ಬಳಿಕ ಅವರ ನಂಬರ್ ಬ್ಲಾಕ್ ಮಾಡುತ್ತಿದ್ದ. ಇದೇ ರೀತಿ ಸಾಕಷ್ಟು ಮಂದಿಯ ಬಳಿ ಹಣ ಪಡೆದು ವಂಚಿಸಿದ್ದ ಆರೋಪಿಯ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದನ್ವಯ ಆರೋಪಿ ರಘುನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗೆ ರಾಮಲಿಂಗಾರೆಡ್ಡಿಯವರ ಸಂಪರ್ಕವೇ ಇಲ್ಲ, ಕೇವಲ ಅವರ ಹೆಸರು ಬಳಸಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.